ನಾಲತವಾಡ: ಜ. 27ರಂದು ನಡೆಯಬೇಕಿದ್ದ ಹಿರೇಮುರಾಳ ಗ್ರಾಮದ ಸಂಗಮೇಶ್ವರ ಪಿಕೆಪಿಎಸ್ ಆಡಳಿತ ಮಂಡಳಿ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿ ರೈತರು ಬ್ಯಾಂಕಿಗೆ ನುಗ್ಗಿ ಕಾರ್ಯದರ್ಶಿಯನ್ನು ತರಾಟೆಗೆ ತಗೆದುಕೊಂಡ ಘಟನೆ ಶನಿವಾರ ನಡೆದಿದೆ.
ವಿವರ: ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದ ಸಂಗಮೇಶ್ವರ ಪಿಕೆಪಿಎಸ್ ಬ್ಯಾಂಕ್‌ನ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಿಗದಿಗೊಳಿಸಿದೆ. ಚುನಾವಣೆ ನಿಯಮಗಳನ್ನು ಗಾಳಿಗೆ ತೂರಿ ಸುಮಾರು 1527ಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದ ಬ್ಯಾಂಕಿನಲ್ಲಿ ಕೇವಲ 353 ಷೇರುದಾರರು ಮಾತ್ರ ಮತದಾನಕ್ಕೆ ಅರ್ಹರು ಎಂದು ನೋಟಿಸ್ ನೀಡಿದ್ದಾರೆ. ಇತರೇ ಸುಮಾರು 1,200ಕ್ಕೂ ಮಿಕ್ಕ ರೈತರಿಗೆ ಕಟ ಬಾಕಿದಾರರು ಹಾಗೂ ಸಾಮಾನ್ಯ ಸಭೆಗೆ ಬಂದಿಲ್ಲ ಎಂಬ ನೆಪದ ತಂತ್ರ ರೂಪಿಸಿ ತಮಗಿಷ್ಟವಾದ ರೈತರಿಗೆ ಮಾತ್ರ ನೋಟಿಸ್ ನೀಡಿದ್ದಾರೆ. ಇದು ಮೋಸದ ಚುನಾವಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕಿನಲ್ಲಿ ಬಲಿಷ್ಠರು ಮಾತ್ರ ಅಧಿಕಾರ ಚಲಾಯಿಸಬೇಕು ಎನ್ನುವ ತಂತ್ರ ರೂಪಿಸಿದ್ದು, ಬ್ಯಾಂಕಿನ ಷೇರುದಾರರಿಗೆ ತಪ್ಪು ಮಾಹಿತಿ ರವಾನಿಸುವ ಕೆಲಸ ಬ್ಯಾಂಕಿನಲ್ಲಿ ನಡೆದಿದೆ. ಷೇರುದಾರರಿಗೆ ಸಭೆಯ ನಿಯಮಗಳ ಕುರಿತು ಮಾಹಿತಿ ಉದ್ದೇಶ ಪೂರ್ವಕವಾಗಿ ನೀಡಿಲ್ಲ. ಮುಗ್ದ ರೈತರನ್ನು ಸಭೆಗೆ ಬಾರದಂತೆ ತಡೆಯೊಡ್ಡಿ ಸದ್ಯ ಚುನಾವಣೆ ವೇಳೆ ಸಭೆಗೆ ಬಂದಿಲ್ಲ ಎಂಬ ನಿಯಮ ಹೇಳಿ ಚುನಾವಣೆಯಿಂದ ದೂರವಿರಿಸುವ ತಂತ್ರ ರೂಪಿಸಿದ್ದಾರೆ ಎಂದು ಆರೋಪಿದರು.
ಪಟ್ಟಭದ್ರ ಹಿತಾಸಕ್ತಿಗಳು ತಾವೇ ಅಧಿಕಾರ ಅನುಭವಿಸಬೇಕು ಎಂದು ಷೇರುದಾರರನ್ನು ಬೀದಿ ಪಾಲು ಮಾಡಲು ರೂಪಿಸಿದ ತಂತ್ರ ಕೈ ಬಿಡಬೇಕು. ಎಲ್ಲರಿಗೂ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಚುನಾವಣೆ ಮುಂದೂಡಬೇಕು. ರೈತರ ಅನ್ಯಾಯ ಸರಿಪಡಿಸಿ ಮತ್ತೆ ಚುನಾವಣೆ ಘೋಷಿಸಬೇಕು. ಅಲ್ಲಿವರೆಗೂ ಚುನಾವಣೆ ನಡೆಸಬಾರದು. ಒಂದು ವೇಳೆ ಅಧಿಕಾರಿಗಳು ಉದ್ಧಟತನ ತೋರಿ ಚುನಾವಣೆ ನಡೆಸಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಸಂಗಣ್ಣ ಹಿರೇಗೌಡ, ಬಸಂತರಾಯ ನಾಗರತ್ತಿ, ಉಮೇಶ ರಡ್ಡಿ, ದಾವಲ ಹಣಗಿ, ಲೋಕೇಶ ಮುರಾಳ, ಸಿದ್ದಪ್ಪ ಸರೂರ, ನಾಗಪ್ಪ ಚಲವಾದಿ, ಗ್ಯಾನಪ್ಪ ಚಲವಾದಿ, ಮೈಬೂಬ ಮುಲ್ಲಾ, ಆರ್.ಆರ್. ಮುಲ್ಲಾ, ಮಲ್ಲಿಕಾರ್ಜುನ ಬಿರಾದಾರ, ಅಮರೇಶ ನಾಗರತ್ತಿ, ಶಿವು ಮುರಾಳ ಸೇರಿದಂತೆ ಅನೇಕ ರೈತರು ಇದ್ದರು.