ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾ.ಪಂ. 2017-18 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಆ. 22ರಂದು ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ತೆಕ್ಕಟ್ಟೆ ಗ್ರಾ.ಪಂ.ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತೆಕ್ಕಟ್ಟೆ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಮಲ್ಯಾಡಿ ರಾಜೀವ ಶೆಟ್ಟಿ ಮಾತನಾಡಿ ಕಳೆದ 20 ವರ್ಷಗಳಿಂದಲೂ ಗ್ರಾಮಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿಯ ವಿಚಾರದ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಪ್ರಸ್ತುತ ತೆಕ್ಕಟ್ಟೆ ಗ್ರಾ.ಪಂ.ವ್ಯಾಪ್ತಿಯಲ್ಲಿನ ತೆಕ್ಕಟ್ಟೆ-ದಬ್ಬೆಕಟ್ಟೆಯಲ್ಲಿನ ಮದ್ಯದಂಗಡಿಯಿಂದಾಗಿ ನಿತ್ಯ ಗ್ರಾಮೀಣ ಭಾಗದಿಂದ ಶಾಲೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರು ನಡೆದು ಸಾಗಲು ಮುಜುಗರವಾಗುವ ಪರಿಸ್ಥಿತಿ ಒಂದೆಡೆಯಾದರೆ ಮದ್ಯ ವ್ಯಸನಿಗಳ ದಂಡು ರಸ್ತೆಯ ಮೇಲೆ ಗುಂಪು ಗುಂಪಾಗಿ ನಿಲ್ಲುವ ಪರಿಣಾಮವಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾದ ಸಂದಿಗ್ಧತೆ ಎದುರಾಗಿದೆ. ಪಿಡಬ್ಲೂéಡಿ ನಿಯಮದಂತೆ ರಸ್ತೆಯಿಂದ 12.5 ಮೀಟರ್ ಬಿಟ್ಟು ಯಾವುದೇ ಕಟ್ಟಡ ಕಟ್ಟಬೇಕು ಈ ಬಗ್ಗೆ ಪಂಚಾಯತ್‌ನಲ್ಲಿ ಸಭೆ ನಡೆದ ಮೇಲೆ ಸ್ಥಳ ಪರಿಶೀಲಿಸಿದ್ದೀರಾ? ಈ ಕಟ್ಟಡಗಳು 12.5 ಮೀಟರ್ ಅಂತರದಲ್ಲಿ ಇದೆಯೇ ?
ಮೂರುವರೆಯಿಂದ ಆರೂವರೆ ಮೀಟರ್ ಅಂತರದಲ್ಲಿ ಕಟ್ಟಡವಿದೆ. ಆದ್ದರಿಂದ ಯಾರೋ ಒಬ್ಬರನ್ನು ಮೆಚ್ಚಿಸುವ ಸಲುವಾಗಿ ತೆಕ್ಕಟ್ಟೆ ಗ್ರಾ.ಪಂ. ನಲ್ಲಿ ಮಾತ್ರ ಬಾರ್‌ಗಳಿಗೆ ಜನವಸತಿ ಪ್ರದೇಶದಲ್ಲಿ ಜನ ವಿರೋಧದ ನಡುವೆಯೂ ಅನುಮತಿ ನೀಡಿರುವುದು ಸರಿಯಲ್ಲ ಒಂದು ವೇಳೆ ಯಾವುದೇ ರೀತಿಯ ಸಂಭವನೀಯ ಅವಘಡಗಳು ಸಂಭವಿಸಿದರೆ ಯಾರು ಜವಬ್ದಾರರು ? ಈ ಹಿನ್ನೆಲೆಯಲ್ಲಿ ಎರಡು ಮದ್ಯದಂಗಡಿಗಳ ಸ್ಥಳಾಂತರಿಸುವ ಬಗ್ಗೆ ಗ್ರಾ.ಪಂ. ಸೂಕ್ತ ನಿರ್ಣಯ ಕೈಗೊಂಡು ಸಾಮಾಜಿಕ ನ್ಯಾಯ ನೀಡಬೇಕಾಗಿದೆ. ಪಕ್ಷ ಬೇಧ ಮರೆತು ಜನಧ್ವನಿಗೆ ಸ್ಪಂದಿಸಬೇಕು ಈ ಬಗ್ಗೆ ಅಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು ಎಂದು ತೀವ್ರವಾಗಿ ವಾಗ್ಧಾಳಿ ನಡೆಸಿದರು.
ತೀವ್ರಗೊಂಡ ಮಾತಿನ ಚಕಾಮಕಿ: ಕೆದೂರು ಪಶು ಸಂಗೋಪನಾ ಕೇಂದ್ರದ ವೈದ್ಯಾಧಿಕಾರಿ ಡಾ| ನಿರಂಜನ್ ಮೂರ್ತಿ ಮಾತನಾಡಿ ಇಲಾಖೆಯಲ್ಲಿ ನಾಲ್ಕು ಹುದ್ದೆಗಳು ಕಾರ್ಯನಿರ್ವಹಿಸಬೇಕಾದ ಸ್ಥಳದಲ್ಲಿ ನಾನೊಬ್ಬನೇ ವೈದ್ಯಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳುತ್ತಿದ್ದಂತೆ ಸ್ಥಳೀಯರಾದ ಅವಿನಾಶ್ ಶೆಟ್ಟಿ ಪಠೇಲರ ಮನೆ ಪ್ರತಿಕ್ರಿಯಿಸಿ ಸರಕಾರಿ ಪಶು ಆಸ್ಪತ್ರೆಯಲ್ಲಿನ ಸಿಬಂದಿಯ ಕೊರತೆಯಿಂದಾಗಿ ಈ ಭಾಗದಲ್ಲಿ ಹೈನುಗಾರಿಕೆ ಮಾಡುವವರು ಖಾಸಗಿ ವೈದ್ಯರನ್ನು ಅವಲಂಬಿಸುತ್ತಿದ್ದಾರೆ ಆದ್ದರಿಂದ ಗ್ರಾ.ಪಂ. ಈ ಬಗ್ಗೆ ಸಮರ್ಪಕವಾದ ನಿರ್ಣಯ ಮಾಡಿ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ಗ್ರಾ.ಪಂ. ಅಧ್ಯಕ್ಷ ಕೊಮೆ ಶೇಖರ್ ಕಾಂಚನ್ ಎದ್ದು ನಿಂತು ಮಾತನಾಡಿ ದನಗಳಿಗೆ ಹುಷಾರ್ ಇಲ್ಲ ಅಂತ ಕೊನೆಗೆ ಎಲ್ಲರೂ ಗ್ರಾ.ಪಂ.ಗೆ ಕರೆಮಾಡಬೇಡಿ. ಗ್ರಾ.ಪಂ. ಅಧ್ಯಕ್ಷರಿಗೆ ಫೋನ್ ಮಾಡಿದರೆ ಸ್ಥಳಕ್ಕೆ ಬರುವಷ್ಟರಲ್ಲಿ ದನ ಸಾಯುತ್ತದೆ ಎನ್ನುತ್ತಿದ್ದಂತೆ ಸಭೆಯಲ್ಲಿ ಒಂದು ರೀತಿಯ ಮಾತಿನ ಚಕಾಮಕಿ ತೀವ್ರಗೊಂಡಿತು.
ತಾ.ಪಂ. ಸದಸ್ಯೆ ಜ್ಯೋತಿ ಪುತ್ರನ್, ಮಾರ್ಗದರ್ಶಿ ಅಧಿಕಾರಿ ಎಚ್.ವಿ. ಇಬ್ರಾಹಿಂಪೂರ್, ಪ್ರಭಾರ ಪಿಡಿಒ ವೀರ ಶೇಖರ್, ಗ್ರಾ.ಪಂ. ಸದಸ್ಯರಾದ ಸಂಜೀವ ದೇವಾಡಿಗ, ಆನಂದ ಕಾಂಚನ್ ತೋಟದ ಬೆಟ್ಟು , ವಿನೋದ್ ದೇವಾಡಿಗ, ವಿಜಯ ಭಂಡಾರಿ, ನೇತ್ರಾವತಿ ಕೆ. ಆಚಾರ್ಯ, ಆಶಾಲತಾ ಶೆಟ್ಟಿ, ರತ್ನಾ ಕುಂದರ್, ಸತೀಶ್ ದೇವಾಡಿಗ ಕಂಚುಗಾರ್‌ಬೆಟ್ಟು ಮತ್ತಿತರರಿದ್ದರು.
ಗ್ರಾ.ಪಂ. ಸಿಬಂದಿ ಸಂಜೀವ ತೆಕ್ಕಟ್ಟೆ ಸ್ವಾಗತಿಸಿ, ನಿರೂಪಿಸಿ, ತೆಕ್ಕಟ್ಟೆ ಕುವೆಂಪು ಕಾರ್ಯದರ್ಶಿ ಚಂದ್ರ ವರದಿ ಮಂಡಿಸಿ, ವಂದಿಸಿದರು.