ಕಲಬುರಗಿ: ಕೇಂದ್ರ ಸರಕಾರ ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ.5ರಷ್ಟು ಜಿಎಸ್‌ಟಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಾತ್ಯಾತೀತ ಜನತಾದಳ ಪಕ್ಷದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮುಖೇನ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಕೇಂದ್ರ ಸರಕಾರ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ರೂಪದ ತೆರಿಗೆ ಹೇರುವುದರಿಂದ ರೈತಾಪಿ ವರ್ಗಕ್ಕೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳುತ್ತದೆ. ಒಂದೆಡೆ ರೈತರ ಖಾತೆಗಳಿಗೆ ಕಳೆದ ಹಲವು ವರ್ಷಗಳಿಂದ ಹಣ ಹಾಕಿ ಈಗ ಏಕಾಏಕಿ ಎಲ್ಲವನ್ನು ವಸೂಲಿ ಮಾಡಲು ನಿಂತಿದೆ ಎಂದು ದೂರಿದರು.
ಇದು ಪಕ್ಕಾ ಜನವಿರೋಧಿ, ರೈತ ವಿರೋಧಿ ನೀತಿಯಾಗಿದೆ. ಬೀಜ, ರಸಗೊಬ್ಬರು ಪುಕ್ಕಟ್ಟೆಯಾಗಿ ಕೊಡುತ್ತೇವೆ ಎಂದು ದೊಡ್ಡದಾಗಿ ಪ್ರಚಾರ ಮಾಡಿಕೊಂಡರು. ಈಗ ಇನ್ನೊಂದು ಬದಿಯಿಂದ ತೆರಿಗೆ ಹೇರಿ ಜೀವ ಹಿಂಡುವ ಕೆಲಸ ನಡೆಯುತ್ತಿದೆ. ಇದರಿಂದ ರೈತಾಪಿ ಮತ್ತು ಕಾರ್ಮಿಕ ವರ್ಗ ಸಂಪೂರ್ಣ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ರಾಜ್ಯ ಸರಕಾರ ಒತ್ತಡ ಹೇರಬೇಕು. ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ರೈತಾಪಿ ವರ್ಗವನ್ನು, ಜನ ಸಾಮಾನ್ಯರನ್ನು ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ಯಾಮರಾವ್ ಸೂರನ್, ಬಸವರಾಜ್ ಬಿರಬಿಟ್ಟೆ, ಮನೋಹರ ಪೋದ್ದಾರ್, ಅಲೀಮ್ ಇನಾಂದಾರ್, ದೇವೀಂದ್ರ ಹಸನಾಪುರ, ಬಸವರಾಜ್ ಸಿದ್ರಾಮ್‌ಗೊàಳ್, ಪ್ರವೀಣ ಜಾಧವ್, ಅರವಿಂದ ರಂಜೀರಿ, ನರಸಯ್ಯ ಗುತ್ತೇದಾರ್, ಶಿವಲಿಂಗಪ್ಪ ಪಾಟೀಲ, ಸುನೀತಾ ಕೋರವಾರ, ಅನಂದ ಮಂಜೂರ ಹುಸೇನ್, ಮಹಮ್ಮೊದ್ ಪಟೇಲ್ ಸೇಡಂ, ಹಮೀದ್‌ಮಿಯಾ ಸೇರಿದಂತೆ ಅನೇಕರು ಇದ್ದರು.