ಇಂಡಿ: ರಾಜ್ಯದ ಎಲ್ಲ ಅಂಗವಿಕಲರಿಗೆ ಪ್ರತಿ ತಿಂಗಳು 6000 ಸಾವಿರ ರೂ. ಮಾಸಾಶನ ನೀಡಬೇಕು. ರಾಜ್ಯದ ವಿದ್ಯಾವಂತ ಅಂಗವಿಕಲರಿಗೆ ಉದ್ಯೋಗ ಕಲ್ಪಿಸಿ ಬದುಕು ರೂಪಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕಾಧ್ಯಕ್ಷ ಎಸ್.ಎಂ. ಮಕಾನದಾರ ಹೇಳಿದರು.
ಬುಧವಾರ ಪಟ್ಟಣದ ಆಡಳಿತ ಸೌಧದ ಮುಂದೆ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವಂತೆ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು 20 ಲಕ್ಷ ಅಂಗವಿಕಲರಿದ್ದರೂ 2022-23ನೇ ಸಾಲಿನ ಬಜೆಟ್‌ನಲ್ಲಿ ಅಂಗವಿಕಲರಿಗೆ ಯಾವುದೇ ಹೊಸ ಸೌಲಭ್ಯಗಳನ್ನು ಘೋಷಣೆ ಮಾಡಿಲ್ಲ. ಅಂಗವಿಕಲರನ್ನು ರಾಜ್ಯ ಸರ್ಕಾರ ಕಡಗಣಿಸಿದೆ. ಇಂದಿನ ದುಬಾರಿ ಕಾಲದಲ್ಲಿ ಅಂಗವಿಕಲರಿಗೆ ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ರಾಜ್ಯ ಸರ್ಕಾರ ಕೂಡಲೆ ಅಂಗವಿಕಲರಿಗೆ ಮಾಸಾಶನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಶಿವಲಿಂಗಪ್ಪ ನಾಯ್ಕೊಡಿ ಮಾತನಾಡಿ, ದಿವ್ಯಾಂಗ ಕಲ್ಯಾಣ ಶೀರ್ಷಿಕೆಯಡಿ ಮಾಸಿಕ ಪಿಂಚಣಿ ನೀಡಬೇಕು. ಹರಿಯಾಣ ಸರ್ಕಾರದ ಮಾದರಿಯಲ್ಲಿ ಅಂಗವಿಕಲರಿಗೆ ವಿವಿಧ ಇಲಾಖೆಯಲ್ಲಿರುವ ಹುದ್ದೆಗಳಿಗೆ ನೇಮಕ ಮಾಡಬೇಕು. ಅಂಗವಿಕಲರ ವ್ಯಕ್ತಿಗಳ ಗೃಹ ತೆರಿಗೆ ವಿನಾಯತಿ ನೀಡಬೇಕು. 40 ಯುನಿಟ್ ವಿದ್ಯುತ್ ಉಚಿತವಾಗಿ ನೀಡಬೇಕು. ಪೆಟ್ರೋಲ್, ಡೀಸೆಲ್ ಶೇ 50 ರಿಯಾಯಿತಿ ದರದಲ್ಲಿ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ, ಶ್ರೀಶೈಲಗೌಡ ಪಾಟೀಲ ಮಾತನಾಡಿದರು ನಿಂಗರಾಜ ಬಿಸನಾಳ, ಸುಮಯ್ಯ ಮೊಮಿನ್, ಬಾಬು ಸಂಗೋಗಿ, ನೂರಹ್ಮದ ಪಠಾಣ, ಭರಮಣ್ಣ ಪೂಜಾರಿ, ಬಸವರಾಜ ಸೊನ್ನ, ಸಿದ್ದು ಗುಲೆ, ರೇಖಾ ಕ್ಷತ್ರಿ, ಸೀತಾ ಪೂಜಾರಿ, ಪಾಂಡು ರಾಠೊಡ, ಕನ್ನಯಸಿಂಗ್ ಹಜಾರೆ, ಶಿವಾನಂದ ಏಳಗಿ, ಈರಣ್ಣ ಡಂಗಿ, ಬಾಬುಶ್ಯಾ ಹೊಸಮನಿ, ಲಕ್ಷ್ಮಣ ಚವ್ಹಾಣ, ವಿಲಾಸ ಶಿವಶರಣ, ನಿಲಾಬಾಯಿ ಕಟ್ಟಿಮನಿ, ಮಹಿಬೂಬ ಅಶ್ಟೇಕರ, ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ರಾಜು ಮುಲ್ಲಾ, ಬಾಬು ಮೇತ್ರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.