ವಿಟ್ಲ: ಪುಣಚ ಗ್ರಾಮದ ದಂಬೆ, ಗುಂಡ್ಯಡ್ಕ, ಗೌರಿಮೂಲೆ ಪರಿಸರದಲ್ಲಿ ಲೋವೋಲ್ಟೆಜ್ ಸಮಸ್ಯೆ ಬಳಕೆದಾರರನು ಕಾಡುತ್ತಿದೆ. ಸುಮಾರು 60 ವರ್ಷಗಳ ಹಿಂದೆ ಅಳವಡಿಸಿದ ತಂತಿಯನ್ನು ಬದಲಾಯಿಸಿಲ್ಲ. ವಿದ್ಯುತ್ ಪರಿವರ್ತಕದ ಸಾಮರ್ಥ್ಯ ಹೆಚ್ಚಿಸಲಿಲ್ಲ. ವಿದ್ಯುತ್ ತಂತಿ ಬದಲಾಯಿಸಿ, ನಿರಂತರ ಸರಿಯಾದ ವಿದ್ಯುತ್ ಪೂರೈಸಬೇಕೆಂದು ದಂಬೆ, ಗುಂಡ್ಯಡ್ಕ, ಗೌರಿಮೂಲೆ ಪರಿಸರದ ಗ್ರಾಹಕರು ಆಗ್ರಹಿಸಿದ್ದಾರೆ.
ಮೆಸ್ಕಾಂ ಬಂಟ್ವಾಳ ಶಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಗೌರಿಮೂಲೆ ಸುರೇಶ್ ನಾಯಕ್ ಜಿ. ಮನವಿ ಸಲ್ಲಿಸಿ, ಈ ಭಾಗದ ಹಳ್ಳಿಯ ನಿವಾಸಿಗಳಿಗೆ 1960ರ ಆಸುಪಾಸಲ್ಲಿ ಗೃಹೋಪಯೋಗ ಮತ್ತು ನೀರಾವರಿಗಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ನೀರಾವರಿಗಾಗಿ ಪಂಪ್ ಸೆಟ್ ಅಳವಡಿಸಲಾಗಿದ್ದು ವಿದ್ಯುತ್ ಪರಿವರ್ತಕವನ್ನು ಸ್ಥಾಪಿಸಲಾಗಿತ್ತು. ಪ್ರಸ್ತುತ ಇದು ಸಾಮರ್ಥ್ಯ ಕಳೆದುಕೊಂಡಿದೆ. ಹಲವು ವಿದ್ಯುತ್‌ಶಕ್ತಿ ಪಂಪ್‌ಸೆಟ್‌ಗಳನ್ನು ಹೊಂದಿರುವ ಇಲ್ಲಿ ವಿದ್ಯುತ್ ಪರಿವರ್ತಕದ ಸಾಮರ್ಥ್ಯ ಸಾಕಾಗದೆ ಲೋವೋಲ್ಟೇಜ್ ಸಮಸ್ಯೆ ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ತಂತಿ ಹಳೆಯದಾಗಿ ಆಗಾಗಿ ಕಡಿದು ಬೀಳಲಾರಂಭಿಸಿದೆ. ನಿತ್ಯ ಸಂಚಾರಿಗಳು, ಜಾನುವಾರುಗಳು ಯಾವುದೇ ಸನ್ನಿವೇಶದಲ್ಲಿ ಅಪಾಯವನ್ನು ಎದುರಿಸುವ ಭಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ಬಳಕೆದಾರರು ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಆದರೆ ಸಮರ್ಪಕ, ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೇ ಶೋಷಣೆಗೊಳಗಾಗಿದ್ದಾರೆ. ಸತತ ಮನವಿ ಸಲ್ಲಿಸಿಯೂ ಗ್ರಾಹಕರಿಗೆ ಅನುಕೂಲವಾದ ಕಾರ್ಯವನ್ನು ಇಲಾಖೆ ಮಾಡಿಕೊಟ್ಟಿಲ್ಲ ಎನ್ನುವುದು ವಾಸ್ತವ.
ಶಾಸಕರ ಸೂಚನೆಗೂ ಬೆಲೆ ಇಲ್ಲ
2019ರ ಜನಸಂಪರ್ಕ ಸಭೆಯಲ್ಲಿ ಇಲ್ಲಿನ ಸಮಸ್ಯೆ ನಿವಾರಣೆಗೆ ಇಆಲಖೆಗೆ ಮನವಿ ಸಲ್ಲಿಸಿದ್ದಾರೆ. ಇಲ್ಲಿನ ಕೃಷಿಕರು ಜಂಟಿ ಪತ್ರ ಬರೆದು ಇಲಾಖೆಗೆ ಎಚ್ಚರಿಸಿ, ವಿದ್ಯುತ್ ಪರಿವರ್ತಕ ಮತ್ತು ತಂತಿಯನ್ನು ಬದಲಾಯಿಸಬೇಕೆಂದು ಕೇಳಿಕೊಂಡಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೂ ಇಲ್ಲಿನ ಕೃಷಿಕರು ಮನವಿ ಸಲ್ಲಿಸಿದ್ದಾರೆ. ಶಾಸಕರು ಈ ಪತ್ರವನ್ನು ಉಲ್ಲೇಖೀಸಿ, 2021ರಲ್ಲೇ ಮೆಸ್ಕಾಂಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆದರೆ ಮೆಸ್ಕಾಂ ಈ ಮನವಿಗಳಿಗೆ ಸ್ಪಂದಿಸಿ ಈ ವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ.
ನಿರ್ವಹಣೆ ಅಗತ್ಯ: ಹೆಚ್ಚುವರಿ ಸಾಮರ್ಥ್ಯವಿರುವ ವಿದ್ಯುತ್ ಪರಿವರ್ತಕವನ್ನು ಸ್ಥಾಪಿಸಬೇಕು. ಹಳೆಯ ತಂತಿಯನ್ನು ಬದಲಾಯಿಸಬೇಕು. ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ವಿದ್ಯುತ್ ನಿರ್ವಹಣೆ ಕಾಮಗಾರಿಗಳನ್ನು ಕಾಲಕಾಲಕ್ಕೆ ಮೆಸ್ಕಾಂ ಮಾಡಬೇಕು. –
ದಯಾನಂದ ನಾಯಕ್ ಗೌರಿಮೂಲೆ, ಕೃಷಿಕರು.