ಗುಂಡ್ಲುಪೇಟೆ: ತಾಲೂಕಿನ ಯರಿಯೂರು ಕೆರೆಗೆ ಕಬಿನಿ ನದಿಮೂಲದಿಂದ ನೀರು ತುಂಬಿಸುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಹಾಗೂ ಉಳಿದ 11 ಕೆರೆಗಳಿಗೆ ನದಿ ನೀರು ತುಂಬಿಸುವ ಮುಂದುವರಿದ ಯೋಜನೆಗೆ ಕಳೆದ ಡಿ.14ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಚಾಲನೆ ನೀಡಿದ್ದರು.
ನಾಲ್ಕು ದಿನಗಳಿಂದ ನೀರು ಹರಿದಿಲ್ಲ: ಚಾಲನೆ ನೀಡಿದ 25 ದಿನಗಳಲ್ಲಿ ವಡ್ಡಗೆರೆ ಹಾಗೂ ಕರಕಲಮಾದಹಳ್ಳಿ ಕೆರೆ ತುಂಬಿಕೊಂಡು ಕೋಡಿಬಿದ್ದ ನೀರು, ಎರಡು ದಿನಗಳ ಕಾಲ ಸಮೀಪದ ಯರಿಯೂರು ಕೆರೆಗೆ ಹರಿದು ಹಳ್ಳಗುಂಡಿಗಳು ತುಂಬಿಕೊಂಡಿದ್ದವು.
ಇನ್ನೂ ಒಂದು ವಾರ ಕಾಲ ನೀರು ಹರಿಸಿದ್ದರೆ ಕೋಡಿ ಬೀಳಲಿದ್ದರೂ ಕಳೆದ ನಾಲ್ಕು ದಿನಗಳಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಹೀಗೆ ಪದೇ ಪದೆ ನೀರು ಹರಿಸುವುದನ್ನು ನಿಲ್ಲಿಸಿದರೆ, ಈ ಬಾರಿಯೂ ಮುಂದುವರಿದ ಯೋಜನೆ ವ್ಯಾಪ್ತಿಗೊಳಪಡುವ ದಾರಿಬೇಗೂರು, ವಡೆಯನಪುರ, ಬೊಮ್ಮಲಾಪುರ, ಶಿವಪುರದ ಕಲ್ಲುಕಟ್ಟೆ ಹಳ್ಳ, ವಿಜಯಪುರ ಅಮಾನಿ ಕೆರೆಗಳಿಗೆ ನೀರು ತುಂಬಿಸಲು ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಲ್ಪ ಪ್ರಮಾಣದಲ್ಲಿ ನೀರು ಖಾಲಿ: ಈಗಾಗಲೇ ಕೋಡಿಬಿದ್ದಿರುವ ವಡ್ಡಗೆರೆ ಹಾಗೂ ಕರಕಲಮಾದಹಳ್ಳಿ ಕೆರೆಗಳಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ನೀರು ಖಾಲಿಯಾಗುವುದರಿಂದ ಇವು ತುಂಬದೆ ಮುಂದೆ ನೀರು ಹರಿಯಲು ಸಾಧ್ಯವಾಗುವುದಿಲ್ಲ.
ಮತ್ತೆ ನೀರು ಹರಿಸುವುದರೊಳೆಗೆ ಭೂಮಿಯು ನೀರನ್ನು ಹೀರಿಕೊಳ್ಳೂವುದರಿಂದ ಕೆರೆ ತುಂಬಿಸುವ ಪ್ರಕ್ರಿಯೆ ವಿಳಂಬವಾಗಲಿದೆ. ಆದ್ದರಿಂದ ಕೂಡಲೇ ಯೋಜನೆಯ ವ್ಯಾಪ್ತಿಯ ಕೆರೆಗಳನ್ನು ಕಾಲಮಿತಿಯಲ್ಲಿ ತುಂಬಿಸಬೇಕು ಎಂದು ಯರಿಯೂರು ಹಾಗೂ ದಾರಿಬೇಗೂರು ಗ್ರಾಮದ ರೈತರು ಒತ್ತಾಯಿಸಿದ್ದಾರೆ.
ಕಬಿನಿ ನದಿ ಮೂಲದಿಂದ ನೀರು ಬರುವ ಮಾರ್ಗದಲ್ಲಿನ ಉಡೀಗಾಲ ಸಮೀಪದ ಆನೆಮಡುವಿನ ಕೆರೆ, ಶ್ಯಾನಾಡ್ರಹಳ್ಳಿ, ಬಲಚವಾಡಿ ಹಾಗೂ ತೆರಕಣಾಂಬಿ ಕೆರೆಗಳಿಗೆ ನೀರು ಬಿಡುವ ಸಲುವಾಗಿ ಹುತ್ತೂರಿಗೆ ಬರುವ ನೀರನ್ನು ನಾಲ್ಕು ದಿನಗಳ ಕಾಲ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಸದ್ಯದಲ್ಲಿಯೇ ಮುಂದಿನ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.
-ಸಿ.ಎಸ್.ನಿರಂಜನಕುಮಾರ್, ಶಾಸಕ