ವಿಜಯಪುರ: ಬಸ್‌ಪಾಸ್ ಅವಧಿ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೇಡಿಕೆಗಳ ಫಲಕ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿ, ರಾಜ್ಯದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪಾಸ್ ಅನ್ನು ಸೆಪ್ಟೆಂಬರ್ 2021ರಲ್ಲಿ ನೀಡಲಾಗಿತ್ತು. ಆದರೆ ಅವರ ತರಗತಿಗಳು ನವೆಂಬರ್‌ನಲ್ಲಿ ಆರಂಭವಾಗಿವೆ. ಹಿಂದಿನಂತೆ ಶೈಕ್ಷಣಿಕ ಅವಧಿವರೆಗೆ ಪಾಸ್ ಮಾನ್ಯತೆ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2021ರಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್‌ಪಾಸ್‌ಗೆ ಅವರ ಶೈಕ್ಷಣಿಕ ವರ್ಷದ ಕೊನೆವರೆಗೂ ಮಾನ್ಯತೆ ಇರುತ್ತದೆ. ಇದು ಇಷ್ಟು ವರ್ಷಗಳವರೆಗೂ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಅಂದರೆ, ನವೆಂಬರ್ ತಿಂಗಳಲ್ಲಿ ತರಗತಿ ಆರಂಭದ ನಂತರ ಪಾಸ್ ಪಡೆದ ವಿದ್ಯಾರ್ಥಿಗಳು ಆಗಸ್ಟ್‌ವರೆಗೂ, ಡಿಸೆಂಬರ್‌ನಲ್ಲಿ ಪಾಸ್ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್‌ವರೆಗೂ ಉಚಿತವಾಗಿ ಓಡಾಡಬಹುದಾಗಿದೆ ಎಂದು ವಿವರಿಸಿದರು.
ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಏಕಾಏಕಿ ಜೂನ್ ತಿಂಗಳಿಗೆ ವಿದ್ಯಾರ್ಥಿ ಬಸ್‌ಪಾಸ್ ಅವಧಿ ಕೊನೆಗೊಳ್ಳಲಿರುವ ಕಾರಣ ಮುಂದಿನ ತಿಂಗಳಿನಿಂದ ದುಡ್ಡು ಕೊಟ್ಟು ಓಡಾಡಬೇಕು ಎಂದು ಹೇಳಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಗ್ರಾಮೀಣ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು ಮಾಡಿದೆ ಎಂದು ದೂರಿದರು.
ಹಲವು ವರ್ಷಗಳ ಹೋರಾಟದ ಫಲವಾಗಿ ವಿದ್ಯಾರ್ಥಿಗಳು ರಿಯಾಯಿತಿ ಪಾಸ್ ಅನ್ನು ಪಡೆದುಕೊಂಡಿದ್ದೇವೆ. ವಾಸ್ತವವಾಗಿ, ನಮ್ಮ ಹೋರಾಟ ಉಚಿತ ಪಾಸ್ ನೀಡಬೇಕು ಎಂಬುದೇ ಆಗಿದೆ. ಹೀಗಿರುವಾಗ, ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ ಮಾನ್ಯತೆ ರದ್ದಾಗಿದೆ ದುಡ್ಡು ಕೊಟ್ಟು ಓಡಾಡಬೇಕು ಎನ್ನುವುದು, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಮೇಲೆ ಮತ್ತಷ್ಟು ಹೊರೆ ಹೊರಿಸಿದಂತಾಗಿದೆ ಎಂದರು.
ಶಿಕ್ಷಣ ಉಳಿಸಿ ಸಮಿತಿ ಎಚ್.ಟಿ.ಭರತಕುಮಾರ ವಿದ್ಯಾರ್ಥಿಳ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು. ಸಂಘಟನೆಯ ದೀಪಾ ವಡ್ಡರ, ಅಜಿತ್, ವಿದ್ಯಾರ್ಥಿಗಳಾದ ಆಯಿಶಾ, ಹನುಮಂತ ಪಾಟೀಲ, ಹನುಮಂತ ಉಪ್ಪಾರ, ಮಹಾಂತೇಶ ಬಿರಾದಾರ, ವಿಕಾಸ್ ಬಡಿಗೇರ, ವಸಂತ ವಾಲೀಕಾರ, ಬಿ.ಹನುಮಂತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.