Advertisement

ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

01:48 PM May 10, 2019 | Suhan S |

ತೆಲಸಂಗ: ಇಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಗ್ರಾಮದ ಎಸ್‌ಎಂವೈಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ವರ್ಷ ಸಮೀಪಿಸುತ್ತಿದೆ ಆದರೆ ಅರ್ಧಕ್ಕೆ ನಿಂತ ಕಟ್ಟಡ ಪ್ರಾರಂಭಿಸದೇ ಶಿಥಿಲಗೊಳ್ಳುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಹತ್ತು ತಿಂಗಳ ಹಿಂದೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಕಟ್ಟಡದ ಭೂಮಿಪೂಜೆ ನೆರವೇರಿಸಿದ್ದರು. ಅಂದಿನಿಂದ ಇಂದಿನವರೆಗೂ ಕಾಮಗಾರಿ ಪ್ರಾರಂಭವಾಗದೇ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಕಟ್ಟಡದ ಕಾಲಮ್‌ಗೆ ಹಾಕಿದ ಕಬ್ಬಿಣ ತುಕ್ಕು ಹಿಡಿಯುತ್ತಿದೆ. ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಸಾಮಗ್ರಿ ಉಪಯೋಗಿಸಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಆದರೆ ಇದ್ಯಾವುದನ್ನು ಇಲ್ಲಿ ಪಾಲನೆ ಮಾಡಿಲ್ಲ. ಮಣ್ಣಿನ ಇಟ್ಟಿಗೆ ಉಪಯೋಗಿಸುವಂತಿಲ್ಲ. ಕಾರ್ಮಿಕ ಮುಖ್ಯ ಕಚೇರಿಯಿಂದ ತಾಂತ್ರಿಕ ಅನುಮೋದನೆ ಪಡೆಯಬೇಕು. ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. 50 ಲಕ್ಷ ವೆಚ್ಚದ 3 ಕಟ್ಟಡ ಮತ್ತು 75 ಲಕ್ಷ ವೆಚ್ಚದ 4 ಕಟ್ಟಡ ಒಟ್ಟು 1 ಕೋಟಿ 25ಲಕ್ಷ ರೂಗಳ ಕಟ್ಟಡಗಳು ಅರ್ಧಕ್ಕೆ ನಿಂತಿದ್ದರಿಂದ ಸಂಪೂರ್ಣ ಗುಣಮಟ್ಟ ಕಳೆದುಕೊಳ್ಳುತ್ತಿವೆ. ಅಲ್ಲದೆ ಸರಕಾರದ ನಿಯಮ ಗಾಳಿಗೆ ತೂರಿ ಮನಬಂದಂತೆ ನಿರ್ಮಿಸುತ್ತಿರುವ ಕಾಮಗಾರಿಯ ತನಿಖೆಯಾಗಬೇಕು. ಅಲ್ಲದೆ ಅರ್ಧಕ್ಕೆ ನಿಲ್ಲಿಸಿರುವ ಬಗ್ಗೆ ಕಾರ್ಮಿಕ ಮುಖ್ಯ ಕಚೇರಿಯಿಂದ ತಾಂತ್ರಿಕ ಅನುಮೋದನೆ ಪಡೆಯದಿರುವ ಬಗ್ಗೆ ತೆಲಸಂಗ ಗ್ರಾಮ ಪಂಚಾಯತ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಬೇಕು.

ನಿರ್ಮಿತಿ ಕೇಂದ್ರದ ನಿಯಮಾವಳಿಯಂತೆಯೇ ಕಟ್ಟಡ ನಿರ್ಮಿಸಬೇಕು ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ಕರವೆ ಅಧ್ಯಕ್ಷ ಬುರಾನ ಅರಟಾಳ, ಜನ ಜಾಗೃತಿ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ರಾಜಕುಮಾರ ಹೊನಕಾಂಬಳೆ ಹಾಗೂ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next