ಚನ್ನರಾಯಪಟ್ಟಣ: ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿ ನಿತ್ಯವೂ ಮಳೆ ಬೀಳುತ್ತಿದ್ದರೂ, ಬಿಸಿಲ ತಾಪ ಕಡಿಮೆಯಾಗಿಲ್ಲ. ದಿನೇ ದಿನೆ ಧಗೆ ಹೆಚ್ಚುತ್ತಿದ್ದು, ಜನಸಾಮಾನ್ಯರು ತಂಪು ಪಾನೀ ಯಕ್ಕೆ ಮೊರೆ ಹೋಗುವುದು ಸಹಜ. ಇದರಿಂದ ತಾಲೂಕಿನ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ರಫ್ತು ಮಾಡಲಾಗುತ್ತಿದೆ.
ರಾಜ್ಯದ ಮೈಸೂರು, ಹುಬ್ಬಳ್ಳಿ, ಬಳ್ಳಾರಿ, ಕಲಬುರಗಿ, ಬೆಂಗಳೂರು ಮಾತ್ರವಲ್ಲದೆ, ದೇಶದ ರಾಜ್ಯಧಾನಿ ನವದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹಾಗೂ ಗೋವಾ ರಾಜ್ಯಕ್ಕೆ ಚನ್ನರಾಯಪಟ್ಟಣದ ಎಳನೀರು ರಫ್ತಾಗುತ್ತಿದೆ.
ಮಳೆ ನಡುವೆಯೂ ಬಿಸಿಲ ಝಳ: ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯಲ್ಲಿ ರಾತ್ರಿ ಮಳೆ ಬರುತ್ತಿದೆ, ತಂಪನೆ ವಾತಾವರಣ ಇರುತ್ತದೆ. ಆದರೆ, ಮಧ್ಯಾಹ್ನ 38 ಡಿಗ್ರಿಗೂ ಹೆಚ್ಚಿನ ತಾಪಮಾನ ಇರುವುದರಿಂದ ಜಿಲ್ಲೆಯಲ್ಲಿ ತಾಲೂಕಿನ ಎಳನೀರಿಗೆ ಬಹಳ ಬೇಡಿಕೆ ಇದೆ. ತಾಲೂಕು ಅರೆಮಲೆನಾಡು ಪ್ರದೇಶ ಆಗಿರುವುದರಿಂದ ಎಳನೀರು ಕುಡಿಯಲು ತುಂಬಾ ಸಹಿಯಾಗಿದ್ದು, ದಣಿವಾರುಸುವಲ್ಲಿ ನೈಸರ್ಗಿಕ ಪಾನೀಯದಲ್ಲಿ ಮೊದಲನೇ ಸ್ಥಾನದಲ್ಲಿದೆ.
ವೃದ್ಧಿಯಾಗಿದೆ ಅಂತರ್ಜಲ: ಕಳೆದ ವರ್ಷ ಉತ್ತಮ ಮಳೆಯಾಗಿದ್ದು, ಸಾಕಷ್ಟು ಕೆರೆಗಳು ಭರ್ತಿಯಾದವು. ಇನ್ನು ಏತನೀರಾವರಿ ಯೋಜನೆ ಮೂಲಕ ನೂರಾರು ಕೆರೆಗೆ ನೀರು ಹರಿಸಲಾಗಿದ್ದು, ಅಂತರ್ಜಲ ವೃದ್ಧಿಯಾಗಿದೆ. ಕೊಳವೆ ಬಾವಿಯಲ್ಲಿ ನೀರು ಸಾಕಷ್ಟು ಇರುವುದರಿಂದ ರೈತರು ತೆಂಗಿನ ತೋಟಕ್ಕೆ ನೀರು ಹರಿಸುತ್ತಿದ್ದಾರೆ. ಇದರಿಂದ ಉತ್ತಮ ಫಸಲು ಬರುತ್ತಿದೆ. ಸಾಕಷ್ಟು ರೈತರು ಎಳನೀರು ಮಾರಾಟ ಮಾಡಲು ಮುಂದಾಗಿದ್ದಾರೆ.
ಮಳೆ ಬರುತ್ತಿದ್ದರೂ ಬೇಸಿಗೆ ರೀತಿಯಲ್ಲಿ ಬಿಸಿಲ ಧಗೆ ಇರುವುದರಿಂದ ಮಹಾನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಳನೀರು ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಎಳನೀರಿಗೆ ಉತ್ತಮ ಬೆಲೆಯಿದೆ. ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕಿನ ಎಳನೀರು ವ್ಯಾಪಾರ ಮಾಡಿ ಹೊರ ಜಿಲ್ಲೆ, ರಾಜ್ಯಕ್ಕೆ ರಫ್ತು ಮಾಡಲಾಗುತ್ತಿದೆ.
-ರಾಮಸ್ವಾಮಿ, ಎಳನೀರು ವರ್ತಕ
ತಾಲೂಕಿನ ದಂಡಿಗನಹಳ್ಳಿ, ಹಿರೀಸಾವೆ, ಬಾಗೂರು, ನುಗ್ಗೆಹಳ್ಳಿ ಹೋಬಳಿಯ ರೈತರು ಕೊಳವೆ ಬಾವಿ ಆಶ್ರಯದಿಂದ ತೆಂಗಿನ ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಭೂಮಿಯಲ್ಲಿನ ಎಳನೀರಿಗೆ ಬಹಳ ಬೇಡಿಕೆ, ಹೇಮಾವತಿ ನಾಲೆ ನೀರಿನಿಂದ ತೋಟ ನಿರ್ವಹಣೆ ಮಾಡುತ್ತಿರುವ ಕಸಬಾ, ಶ್ರವಣಬೆಳಗೊಳ ಹೋಬಳಿ ಎಳನೀರು ನೋಡಲು ದಪ್ಪದಾಗಿದ್ದು, ನೀರು ಹೆಚ್ಚಿರುತ್ತದೆ. ಆದರೆ, ನೀರು ಸಪ್ಪೆಯಾಗಿದ್ದು, ಕುಡಿಯಲು ಅಷ್ಟು ರುಚಿಸುವುದಿಲ್ಲ.
– ಗಿಡ್ಡೇಗೌಡ, ಸ್ಥಳೀಯ ಎಳನೀರು ಮಾರಾಟಗಾರ
-ಶಾಮಸುಂದರ್ ಕೆ.ಅಣ್ಣೇನಹಳ್ಳಿ