ಬೆಂಗಳೂರು: ಸತತ ಎರಡು ವರ್ಷ ನೆರೆಯಿಂದ ಪ್ಲಾಂಟೇಷನ್ ಬೆಳೆಗಳ ಉತ್ಪಾದನೆಯಲ್ಲಿ ಕುಸಿತ ಕಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 2019ರ ಮಾರ್ಚ್ ಅಂತ್ಯದವರೆಗಿನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಕಳೆದ ವರ್ಷ ಭಾರೀ ಮಳೆಯಿಂದ ರಾಜ್ಯದಲ್ಲಿ ಶೇ.8-10 ಪ್ಲಾಂಟೇಷನ್ ಬೆಳೆ ಬೆಳೆಯುವ ಪ್ರದೇಶ ಕೊಚ್ಚಿಹೋಗಿದೆ. ಇದರಿಂದ ಶೇ.25-30 ಉತ್ಪಾದನೆ ಕುಸಿದಿದೆ. ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿದ್ದು, ನಷ್ಟದ ನಿಖರ ಅಂದಾಜು ಸಿಕ್ಕಿಲ್ಲ. ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರಗಳು ಧಾವಿಸಬೇಕು. ತಕ್ಷಣಕ್ಕೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬರುವ ಬಜೆಟ್‌ನಲ್ಲಿ ಶೇ.3ರ ಬಡ್ಡಿ ದರದಲ್ಲಿ 25 ಲಕ್ಷದವರೆಗಿನ ಬೆಳೆಸಾಲ ಹಾಗೂ ಪ್ಲಾಂಟೇಷನ್ ಪ್ರದೇಶದ ಅಭಿವೃದ್ಧಿ ಸಾಲ ನೀಡುವುದಾಗಿ ಘೋಷಿಸಬೇಕು ಎಂದು ಕೆಪಿಎ ಅಧ್ಯಕ್ಷ ಎಂ.ಬಿ.ಗಣಪತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ದೇಶದಲ್ಲಿ ಉತ್ಪಾದನೆಯಾಗುವ ಕಾಫಿ ಬೆಳೆಯಲ್ಲೇ ಶೇ.70 ರಫ್ತಾಗುತ್ತದೆ. ಇದರಲ್ಲಿ ಕರ್ನಾಟಕದ ಕೊಡುಗೆಯೂ ಹೆಚ್ಚಿದೆ. ರಾಜ್ಯದಲ್ಲಿ 1,600 ಹೆಕ್ಟೇರ್‌ನಷ್ಟು ಪ್ರದೇಶ ಹಾಳಾಗಿದ್ದು, ನಿರೀಕ್ಷೆಗಿಂತ ಅರೇಬಿಕಾ ತಳಿಯಲ್ಲಿ 13,200 ಮೆಟ್ರಿಕ್ ಟನ್ (ಶೇ. 16.27) ಹಾಗೂ ರೋಬಸ್ಟಾ ತಳಿಯ ಕಾಫಿ ಉತ್ಪಾದನೆಯು 35,050 ಮೆಟ್ರಿಕ್ ಟನ್ (ಶೇ.18.78) ಇಳಿಕೆ ಕಂಡುಬಂದಿದೆ. ದಾಖಲೆ ಪ್ರಮಾಣದ ಕುಸಿತ ಇದಾಗಿದೆ. ಇದರ ಬಿಸಿ ಕೊಡಗು, ಹಾಸನ, ಚಿಕ್ಕಮಗಳೂರು ಭಾಗದ ಬೆಳೆಗಾರರಿಗೆ ತಟ್ಟಿದೆ.
ಹುಳುಬಾಧೆಗೆ ಕರಗಿದ ಕಾಫಿ: ಬಿಳಿಕಾಂಡ ಕೊರಕ ಹುಳುಬಾಧೆ (ವೈಟ್ ಸ್ಟೆಮ್ ಬೋರರ್) ಬೆಳೆಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿ ವರ್ಷ ಶೇ. 10- 15 ಬೆಳೆಯು ಇದಕ್ಕೆ ಬಲಿಯಾಗುತ್ತಿದೆ. ಸುಮಾರು ವರ್ಷಗಳಿಂದ ಇದು ಸಮಸ್ಯೆಯಾಗಿದ್ದರೂ, ಇದುವರೆಗೆ ಸೂಕ್ತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ಈ ಕೀಟಬಾಧೆಯಿಂದಲೇ ಕಾಫಿ ಬೆಳೆವ ಪ್ರದೇಶ ಶೇ. 10 ಕಡಿಮೆ ಆಗುತ್ತಿದೆ. ಹೀಗಾಗಿ ಸರ್ಕಾರ ಪ್ರತಿ ಎಕರೆಗೆ 18 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕಾಳುಮೆಣಸು ಉತ್ಪಾದನೆ ಕುಸಿತ: ಕಾಳಮೆಣಸು ಉತ್ಪಾದನೆಯು ಕಳೆದ ವರ್ಷ 64 ಸಾವಿರ ಟನ್ ಇತ್ತು. ಈ ವರ್ಷ ಇದು 45 ಸಾವಿರ ಟನ್‌ಗೆ ಕುಸಿದಿದೆ. ಟೀ ಮತ್ತು ರಬ್ಬರ್‌ನಲ್ಲಿ ಕೂಡ ಇದೇ ಸ್ಥಿತಿ ಇದೆ. ಈ ನಡುವೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಈ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಶೋಧನೆಗೆ ಅವಕಾಶವಿಲ್ಲ: ಕಾಫಿ ತಳಿಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಕಂಡುಬರುತ್ತಿಲ್ಲ. 2007ರಲ್ಲಿ ಚಂದ್ರಗಿರಿ ಎಂಬ ತಳಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಬಳಿಕ ಯಾವುದೇ ಕೊಡುಗೆ ಇಲ್ಲ. ಅಸೋಸಿಯೇಷನ್‌ನಿಂದಲೂ ಸಂಶೋಧನೆಗೆ ಅವಕಾಶ ನೀಡುತ್ತಿಲ್ಲ. ಆದರೆ, ಬ್ರೆಜಿಲ್‌ನಲ್ಲಿ ಪ್ರತಿ ಆರು ತಿಂಗಳಿಗೊಂದು ತಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಿದೆ ಎಂದು ಕೆಪಿಎ ಅಧ್ಯಕ್ಷ ಎಂ.ಬಿ.ಗಣಪತಿ ತಿಳಿಸಿದರು.