ಬೆಂಗಳೂರು: ಕಬ್ಬಿನ ಹಳೆಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.11ರಂದು ಕರ್ನಾಟಕ ರಾಜ್ಯ ರೈತ ಸಂಘ ಮುಖ್ಯಮಂತ್ರಿಗಳ ನಿವಾಸ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬೆಳಗ್ಗೆ 11 ಗಂಟೆಗೆ ಸಿಟಿ ರೈಲ್ವೆ ನಿಲ್ದಾಣದಿಂದ ರೈತ ಸಂಘದ ನೂರಾರು ಕಾರ್ಯಕರ್ತರು ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.
ಕಬ್ಬು ಬೆಳೆಗಾರರು ಬೆಲೆಯಲ್ಲಿ ಮೋಸ, ತೂಕದಲ್ಲಿ ವಂಚನೆ, ಬಾಕಿ ಪಾವತಿಯಲ್ಲಿ ವಿಳಂಭ ಸೇರಿದಂತೆ ಮತ್ತಿತರರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಶೇ.10ರಷ್ಟು ಇಳುವರಿಯ ಮಾನದಂಡ ಮಾಡಿ ಕಾರ್ಖಾನೆಗೆ ಅನುಕೂಲವಾಗುವ ನೀತಿಯನ್ನು ಅನುಸರಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯಮಾಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಕಬ್ಬಿನ ಕಾರ್ಖಾನೆಯ ಮಾಲೀಕರು ವಿವಿಧ ರಾಜಕೀಯ ಪಕ್ಷಗಳ ಮುಖಂಡರಾಗಿದ್ದಾರೆ. ನೂರಾರು ರೈತರಿಗೆ ಬಾಕಿ ನೀಡದೆ ಕಾಲಹರಣ ಮಾಡುತ್ತಿದ್ದಾರೆ. ಎಫ್.ಆರ್.ಪಿ.ಬೆಲೆಗಿಂತಲೂ ಕಡಿಮೆ ಬೆಲೆಗೆ ರೈತರಿಂದ ಕಬ್ಬು ಖರೀದಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿ ಮಾಡದೆ ಕಾರ್ಖಾನೆ ಮಾಲೀಕರು ಶೋಷಣೆ ಮಾಡುತ್ತಿದ್ದಾರೆ. ಈ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿನಾಥನ್ ವರದಿ ಜಾರಿಯ ಬಗ್ಗೆ ಮಾತನಾಡಿದ್ದರು. ಆದರೆ, ಅವರು ಪ್ರಧಾನಿ ಹುದ್ದೆ ಏರುತ್ತಿದ್ದಂತೆ ಇದನ್ನು ಮರೆತಿದ್ದಾರೆ. ಬಂಡವಾಳ ಶಾಹಿಗಳನ್ನು ಒಲೈಕೆ ಮಾಡಲು ರೈತರ ಹಿತವನ್ನು ಬಲಿ ತೆಗೆದುಕೊಳ್ಳಲು ಹೊರಟಿದ್ದಾರೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ನಿವಾಸ ಮುತ್ತಿಗೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧಡೆಗಳಿಂದ ರೈತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.