Advertisement
ಗಂಗೊಳ್ಳಿ, ಬಸ್ರೂರು ಬಂದರು ಅನಾದಿ ಕಾಲದಿಂದ ವ್ಯಾಪಾರ ಕೇಂದ್ರವೆಂದು ಇತಿಹಾಸದಲ್ಲೇ ದಾಖಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯ ಮೊದಲ ಚರ್ಚ್ 1560ರಲ್ಲಿ ಗಂಗೊಳ್ಳಿಯಲ್ಲಿ ಸ್ಥಾಪನೆಯಾಯಿತಂತೆ. ಸಣ್ಣ ಸಣ್ಣ ಕುದ್ರುಗಳು, ಸೀವಾಕ್ ಇರುವ ಪ್ರವಾಸಿ ತಾಣ ಗಂಗೊಳ್ಳಿಯ ವಿಶೇಷ. 16ನೇ ಶತಮಾನದ ಕೆಳದಿ ಅರಸರ ಬಂದರು, ಟಿಪ್ಪುಸುಲ್ತಾನ್ ಹಡಗು ನಿರ್ಮಿಸುತ್ತಿದ್ದ ಜಾಗ, ಪೋರ್ಚುಗೀಸರ ಮೊದಲ ವಸಾಹತುವಿನ ಜಾಗ ಇದಾಗಿತ್ತಂತೆ.
Related Articles
Advertisement
ಜೆಟ್ಟಿ ಕುಸಿತ, ಇನ್ನೂ ಪ್ರಸ್ತಾವನೆ ಹಂತದಲ್ಲೇ ಇರುವ ಜೆಟ್ಟಿ ವಿಸ್ತರಣೆ, ಮ್ಯಾಂಗ್‌ನೀಸ್ ವಾರ್ಪ್ ಜೆಟ್ಟಿಯ ದುರ್ಬಲತೆ, ಮಾಡು ಇಲ್ಲದ ಮೀನುಗಾರಿಕಾ ಪ್ರಾಂಗಣ-ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರೆ ಮೀನುಗಾರರಿಗೆ ಅನುಕೂಲವಾದೀತು. ಸ್ಥಳೀಯ ಆರ್ಥಿಕತೆಗೂ ಬೆಂಬಲ ಸಿಕ್ಕೀತು. ಬಂದರು ಜೆಟ್ಟಿ ಕಾಮಗಾರಿ ಬೇಡಿಕೆಯಷ್ಟು ಪೂರ್ಣವಾಗಿಲ್ಲ. ಕಾಮಗಾರಿ ವಿಳಂಬವಾಗುತ್ತಿದೆ. ಇದು ಆದಷ್ಟು ಬೇಗ ಪೂರ್ಣಗೊಳ್ಳಬೇಕಿದೆ.
ಕಸದ ನಿರ್ವಹಣೆಯ ಸಮಸ್ಯೆಯೂ ಇದೆ. ತ್ಯಾಜ್ಯ ವಿಳೇ ಘಟಕ ಇದ್ದರೂ ಘಟಕದ ಸುತ್ತಲಿನ ರಸ್ತೆಯೇ ಕಸದ ಬೀಡಾಗಿದೆ. ಇದನ್ನೂ ಶೀಘ್ರಗತಿಯಲ್ಲಿ ಪರಿಹರಿಸಬೇಕಿದೆ.
ಕುಡಿಯುವ ನೀರಿನ ಸಮಸ್ಯೆ ಇದೆ. ಸಮುದ್ರದ ಬದಿಯಲ್ಲೇ ಇದ್ದರೂ ಪೇಟೆಯ ಒಳಭಾಗದ ಮನೆಗಳಲ್ಲಿ ಬೇಸಗೆಯಲ್ಲಿ ಕುಡಿಯಲು ನೀರಿನ ಕೊರತೆ ಕಾಡುತ್ತದೆ. ಶುದ್ಧ ಕುಡಿಯುವ ನೀರಿನ ಘಟಕವೊಂದು ಉಪಯೋಗವಿಲ್ಲದೇ ಹಾಳಾಗುತ್ತಿದೆ.ಇದು ದುರಸ್ತಿಯಾದರೆ ಅನುಕೂಲವಾಗಲಿದೆ. ಒಳ ರಸ್ತೆಗೆ ಡಾಮರು ಹಾಕಿಲ್ಲ. ಇದರಿಂದ ಸಂಚರಿಸುವುದೇ ದುಸ್ತರ ಎನ್ನುವಂತಾಗಿದೆ. ಈ ಸಮಸ್ಯೆಯೂ ಬಗೆಹರಿದು, ಒಳ ರಸ್ತೆಗಳು ಸುಂದರಗೊಳ್ಳಬೇಕಿದೆ.
ಬಂದರಿನ ಇತಿಹಾಸ 1565ರ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯದ ಸೋಲಿನ ಅನಂತರದ ಸಮಯದಲ್ಲಿ, ಗಂಗೊಳ್ಳಿ ಕೆಳದಿಯ ನಾಯಕರ ಆಳ್ವಿಕೆಗೆ ಒಳಪಟ್ಟಿತು. 1560 ರ ಸುಮಾರಿಗೆ ಪೋರ್ಚುಗೀಸ್ ಮತ್ತು ಗೋವಾ ಕೆಥೋಲಿಕ್ ಕುಟುಂಬಗಳು ಗಂಗೊಳ್ಳಿ ಭಾಗಕ್ಕೂ ವಲಸೆ ಬಂದವು. ಗಂಗೊಳ್ಳಿ ಮತ್ತು ಬಸೂÅರಿನಲ್ಲಿ (ಆಗ ಬಾರ್ಸಿಲರ್ ಎನ್ನುತ್ತಿದ್ದರು) ಹೊಸ ನೆಲೆಯಿಂದ ತಮ್ಮ ಹಳೆಯ ವ್ಯಾಪಾರವನ್ನು ಪುನರಾರಂಭಿಸಿದ್ದರಿಂದ ಈ ಪ್ರದೇಶ ಅಭಿವೃದ್ಧಿಯೆಡೆಗೆ ಸಾಗಿತು. ಹೀಗೆ ಐದಾರು ಶತಮಾನಗಳಿಂದ ಗಂಗೊಳ್ಳಿ ಬಂದರು ಪ್ರಸಿದ್ಧವಾಗಿದೆ.
ತುರ್ತಾಗಿ ಆಗಬೇಕಾದದ್ದು
ಕುಂದಾಪುರ ಗಂಗೊಳ್ಳಿ ಸೇತುವೆನಿರ್ಮಾಣ
ಬಂದರು ಜೆಟ್ಟಿ ಕಾಮಗಾರಿಗೆ ಆದ್ಯತೆ
ಕಸದ ಸಮಸ್ಯೆಗೆ ಪರಿಹಾರ
ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ
ಒಳ ರಸ್ತೆಗಳಿಗೆ ಡಾಮರು
ಗಂಗೊಳ್ಳಿ ಎಂದರೆ…
ಗಂಗೊಳ್ಳಿ ಮೂರು ದಿಕ್ಕುಗಳಲ್ಲಿ ನೀರಿನಿಂದ ಕೂಡಿದೆ. ನದಿಗಳಾದ ವಾರಾಹಿ-ಕೇದಕ- ಕುಬ್ಜ-ಸೌಪರ್ಣಿಕಾ-ಚಕ್ರಾ ನದಿಗಳು ಸಂಗಮವಾಗಿ ಸಮುದ್ರ ಸೇರುವುದು ಗಂಗೊಳ್ಳಿಯಲ್ಲಿ. 5 ನದಿಗಳ ಸಂಗಮವಾಗುವ ಕಾರಣ ಪಂಚಗಂಗಾವಳಿ ಎಂಬ ಹೆಸರು. ಕ್ರಮೇಣ ಇದು ಗಂಗೊಳ್ಳಿ ಎಂದಾಯಿತು.
ಗಂಗೊಳ್ಳಿಯಲ್ಲಿ ಪೊಲೀಸ್ ಠಾಣೆ ಕಚೇರಿ ತೆರೆಯಬೇಕು ಎನ್ನವುದು ಬಹುದಿನದ ಬೇಡಿಕೆ. ಉಪಠಾಣೆ ಇದೆ. ಅದೂ ಮಾಳಿಗೆಯಲ್ಲಿ. ಆಗಾಗ ಸಿಬಂದಿ ಕೊರತೆಯೂ ಇರುತ್ತದೆ. ಕೋಮುಸೂಕ್ಷ್ಮ ಪ್ರದೇಶ ಗಂಗೊಳ್ಳಿಗೆ ಮಂಜೂರಾದ ಠಾಣೆ ಇರುವುದು ಗಂಗೊಳ್ಳಿಯಿಂದ ದೂರದ ಹೆದ್ದಾರಿ ಬಳಿ ತ್ರಾಸಿಯಲ್ಲಿ. ಅಲ್ಲಿಂದ ಪೊಲೀಸರ ಆಗಮನ ಗಂಗೊಳ್ಳಿಗೆ ವಿಳಂಬವಾಗುತ್ತದೆ ಎನ್ನುವುದು ಜನರ ಆತಂಕ. ಅನಿಯಮಿತ ವಿದ್ಯುತ್ ಸಂಪರ್ಕಕ್ಕಾಗಿ ಇಲ್ಲೇ ವಿದ್ಯುತ್ ಉಪಕೇಂದ್ರ ತೆರೆಯಬೇಕೆಂಬ ಬೇಡಿಕೆಯೂ ಅನಾದಿ ಕಾಲದಿಂದ ಇದೆ. ಯಾವಾಗ ಈಡೇರುತ್ತದೆ ಎನ್ನುವುದು ಸದ್ಯ ಯಾರಿಗೂ ತಿಳಿದಿಲ್ಲ
ಜೆಟ್ಟಿ ಬೇಗ ವಿಸ್ತರಿಸಲಿ: ಜೆಟ್ಟಿ ಕಾಮಗಾರಿ ನಡೆಯುತ್ತಿದ್ದು ವಿಸ್ತರಣೆ ಬೇಗ ನಡೆಸಬೇಕಿದೆ. ಜೆಟ್ಟಿ ಎತ್ತರಿಸಿದರೆ ದೋಣಿಗಳಿಗೆ ಸಮಸ್ಯೆಯಾಗಲಿದೆ. ಪರ್ಸಿಯನ್ ಬೋಟ್ ಹಾಗೂ ನಾಡದೋಣಿಗೆ ಅನುಕೂಲವಾಗುವಂತೆ ನಿರ್ಮಿಸಬೇಕು. –ರಾಮಪ್ಪ ಖಾರ್ವಿ, ಮೀನುಗಾರರು
ಸಿಬಂದಿ ಕೊರತೆಯಿದೆ: ಕಸ ವಿಲೇವಾರಿಗೆ ಸಿಬಂದಿ ಕೊರತೆಯಿದ್ದು ಸರಿಪಡಿಸಲಾಗುವುದು. ನರೇಗಾದಲ್ಲಿ ಪ್ರತಿ ಮನೆಗೂ ಬಚ್ಚಲು ಮಾಡಲಾಗಿದೆ. 2 ವರ್ಷದಲ್ಲಿ ಅನೇಕ ಅಭಿವೃದ್ಧಿ ಮಾಡಲಾಗಿದೆ. –ಉಮಾಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ
-ಲಕ್ಷ್ಮೀ ಮಚ್ಚಿನ