ಕಲಬುರಗಿ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ಹಲವು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ಮಾಡಿದರು.
ಕಳೆದ ಎಂಟು ತಿಂಗಳಿಂದ ನೌಕರರ ಸಂಬಳ ಪಾವತಿ ಆಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದರು.
ವೇತನ ಇಲ್ಲದೆ ಇರುವುದರಿಂದ ಹಲವು ಖಾಸಗಿ ಲೇವಾದೇವಿಗಾರರ ಬಳಿಯಲ್ಲಿ ತೆಗೆದುಕೊಂಡಿರುವ ಸಾಲ ವಸೂಲಿ ಮಾಡುವ ವ್ಯಕ್ತಿಗಳಿದ ತೀವ್ರ ಒತ್ತಡ ಹೆಚ್ಚಿದೆ. ಅಲ್ಲದೇ, ಅಧಿಕಾರಿಗಳು ಪ್ರತಿ ವಿಷಯದಲ್ಲೂ ಅನಗತ್ಯವಾಗಿ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಅತ್ಯುತ್ತಮ ಕೆಲಸ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾನಿರತ ನೌಕರರು ಆಪಾದಿಸಿದರು.
ಗುತ್ತಿಗೆ ನೀಡಿರುವ ಸಂಸ್ಥೆಗಳು ಸರಿಯಾಗಿ ಪಿಎಫ್, ಇಎಸ್‌ಐ ಹಣ ಜಮಾ ಮಾಡುತ್ತಿಲ್ಲ. ಸರಕಾರ ನಿಗದಿ ಮಾಡಿದ ಕನಿಷ್ಟ ವೇತನವೂ ಸಿಗುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ನೌಕರಿಯಿಂದ ತೆಗೆದು ಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ್ ಕಠಾರೆ, ಸಹ ಕಾರ್ಯದರ್ಶಿ ಮಲ್ಲಮ್ಮ ಕೂಡಿ, ಎಂ.ಬಿ.ಸಜ್ಜನ್, ಸಿದ್ದರಾಮ ಹರವಾಳ, ಫಾತಿಮಾಬೇಗಂ ಫತ್ತೆಪಹಾಡ್, ಬಾಬು ಹೊಸಮನಿ, ನಾಗರಾಜ್ ಹೆಬ್ಟಾಳ್ ಇತರರು ಇದ್ದರು.