ಆಲಮಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘದ ವತಿಯಿಂದ ಸೋಮವಾರ ಕೆಬಿಜೆನ್ನೆಲ್ ಆಲಮಟ್ಟಿ ವಲಯ ಮುಖ್ಯ ಅಭಿಯಂತರಗೆ ಮನವಿ ಸಲ್ಲಿಸಲಾಯಿತು.
ಅಣೆಕಟ್ಟು ಸಸ್ಯಪಾಲನಾ ಕ್ಷೇತ್ರದಿಂದ ಅಣೆಕಟ್ಟು ವೃತ್ತದ ಮೂಲಕವಾಗಿ ತಮಟೆ ವಾದನದೊಂದಿಗೆ ಮುಖ್ಯ ಅಭಿಯಂತರರ ಕಚೇರಿಯವರೆಗೆ ಆಗಮಿಸಿದ ಗುತ್ತಿಗೆದಾರರ ಸಂಘದ ಪದಾಕಾರಿಗಳು ಮುಖ್ಯ ಅಭಿಯಂತರ ಎಚ್. ಸುರೇಶ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, 5 ಲಕ್ಷದಿಂದ 5 ಕೋಟಿಗಳವರೆಗಿನ ಕಾಮಗಾರಿಗಳನ್ನು ಒಂದುಗೂಡಿಸಿ 50 ಕೋಟಿ ರೂ.ಗಳಿಂದ 80 ಕೋಟಿ ರೂ. ಮೊತ್ತದವರೆಗೆ ಒಂದೇ ಕಾಮಗಾರಿ ಮಾಡಿ ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಕರೆಯುತ್ತಿದ್ದು, ಇದರಿಂದ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಪ್ಯಾಕೇಜ್ ಪದ್ದತಿಯನ್ನು ಶಾಶ್ವತವಾಗಿ ರದ್ದು ಗೊಳಿಸಬೇಕು ಎಂದು ಆಗ್ರಹಿಸಿದರು.
ಆಲಮಟ್ಟಿ ವಲಯ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಭಾಗಗಳ ಕಚೇರಿಗಳಲ್ಲಿ ಕರೆಯಲಾಗುವ ಕಾಮಗಾರಿಗಳ ಟೆಂಡರ್‌ಗಳಲ್ಲಿ ರಾಜಕೀಯ ಹಸ್ತಕ್ಷೇಪ ವಿಪರೀತವಾಗಿದೆ. ಇದರಿಂದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮಾನಸಿಕ ಹಿಂಸೆಯಾಗುತ್ತಿದ್ದು ಇದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಿಗಮದಿಂದ ಕರೆಯಲಾಗುತ್ತಿರುವ ವಿವಿಧ ಕಾಮಗಾರಿಗಳ ಟೆಂಡರ್ ಗಳಲ್ಲಿ ಕೆಲ ಗುತ್ತಿಗೆದಾರರು ಅತಿ ಕಡಿಮೆ ದರದಲ್ಲಿ ಟೆಂಡರ್ ಪಡೆಯುವುದರಿಂದ ಕಾಮಗಾರಿಯ ಗುಣಮಟ್ಟದಲ್ಲಿ ವ್ಯತ್ಯಾಸವಾಗಲಿದೆ. ಅಂಥ ಗುತ್ತಿಗೆದಾರರ ಟೆಂಡರ್‌ಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಸಂಬಂಧಿಸಿದ ವಿಭಾಗಗಳ ಕಾರ್ಯಪಾಲಕ ಅಭಿಯಂತರುಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅಂದಾನಯ್ಯ ಮುಷ್ಠಿಗೇರಿ, ಅಧ್ಯಕ್ಷ ಮಲ್ಲಿಕಾರ್ಜುನ ಮೇಟಿಯವರ ನೇತೃತ್ವದಲ್ಲಿ ಗುತ್ತಿಗೆದಾರರ ಸಂಘದ ಸದಸ್ಯರುಗಳು ಹಾಜರಿದ್ದರು.