ಕಲಬುರಗಿ: ನಗರದ ದೇವಿನಗರದಲ್ಲಿನ ರಾಮಮಂದಿರ ಬಳಿಯಿರುವ ವೈನ್‌ಶಾಪ್‌ನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಎಸ್. ಹಿರೇಮಠ ನೇತೃತ್ವದಲ್ಲಿ ಅಬಕಾರಿ ಇಲಾಖೆ ಕಚೇರಿ ಎದುರು ಧರಣಿ ನಡೆಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ವೈನ್‌ಶಾಪ್ ಬಳಿಯೇ ರಾಮಮಂದಿರ ಹಾಗೂ ಸುತ್ತಮುತ್ತ ಬಡಾವಣೆಗಳು ಇರುವುದರಿಂದ ಮದ್ಯದಂಗಡಿಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದರು.
ಈ ಮೊದಲು ಸ್ವಲ್ಪ ದೂರದಲ್ಲಿದ್ದ ಮದ್ಯದಂಗಡಿಯನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಸ್ಥಳಾಂತರಿಸಲಾಗಿತ್ತು. ಈಗ ಅದಕ್ಕೂ ಸಮೀಪದಲ್ಲಿಯೇ ಮದ್ಯದಂಗಡಿ ಸ್ಥಾಪಿಸಲಾಗಿದೆ. ಅದು ರೋಜಾ ಬಡಾವಣೆಯಲ್ಲಿನ ವೈನ್‌ಶಾಪ್‌ನ್ನು ಎರಡು ದಿನಗಳ ಮುಂಚೆ ಜಿಲ್ಲಾಧಿಕಾರಿಗಳು ಸ್ಥಳಾಂತರಕ್ಕೆ ಪರವಾನಿಗೆ ನೀಡಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಮದ್ಯದಂಗಡಿ ಸಮೀಪ ಹನುಮಾನ ಮಂದಿರ, ರಾಮಮಂದಿರವಿದೆ. ನಿರ್ಬಂಧಿತ 100 ಮೀಟರ್ ವ್ಯಾಪ್ತಿಯೊಳಗೆ ಮದ್ಯದಂಗಡಿ ಸ್ಥಾಪಿಸಿದ್ದು, ಅಬಕಾರಿ ಇಲಾಖೆಯ ಅಧಿನಿಯಮದ ಉಲ್ಲಂಘನೆಯಾಗಿದೆ. ಈ ಮೊದಲು ಮದ್ಯದಂಗಡಿ ಸ್ಥಳಾಂತರಕ್ಕೆ ರಾಮಮಂದಿರ
ಟ್ರಸ್ಟ್ ಅಧ್ಯಕ್ಷರಾದ ಸರಸ್ವತಿಬಾಯಿ ತಂತ್ರಿ, ಜಯ ಕರ್ನಾಟಕ ಸಂಘಟನೆಯವರು ಅನೇಕ ಬಾರಿ ಹೋರಾಟ ನಡೆಸಿದ್ದರೂ ಯಾವದೇ ಕ್ರಮಕೈಗೊಂಡಿಲ್ಲ ಎಂದರು.
ಪ್ರತಿಭಟನೆಯಲ್ಲಿ ಆಂದೋಲಾದ ಕೋರಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಮಹಾಸ್ವಾಮೀಜಿ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ರಾಮಮಂದಿರ ಟ್ರಸ್ಟ್ ಅಧ್ಯಕ್ಷೆ ಸರಸ್ವತಿಬಾಯಿ ತಂತ್ರಿ, ಮೃತ್ಯುಂಜಯ, ಸುನೀಲ, ಗಂಗಾಧರ, ಸುರೇಶ, ವಿಕಾಸ ಪಾಟೀಲ, ವಿಜಯಕುಮಾರ ಪಾಟೀಲ ತೆಗನೂರ, ಹಣಮಂತ ಪೂಜಾರಿ, ಸಂತೋಷ ಜಾನೆ ಹಾಗೂ ಇತರರಿದ್ದರು.