Advertisement

ನಾಡ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಬೇಡಿಕೆ

10:01 PM Feb 13, 2021 | Team Udayavani |

ನಾಡ: ವೇಗವಾಗಿ ಬೆಳೆಯುತ್ತಿರುವ ಹಾಗೂ ಜನದಟ್ಟಣೆ ಹೆಚ್ಚುತ್ತಿರುವ ಪಟ್ಟಣಗಳಲ್ಲಿ ನಾಡ ಗ್ರಾ.ಪಂ. ಮುಂಚೂಣಿಯಲ್ಲಿದೆ. ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ನೆಲೆಯಲ್ಲಿ ಈ ಆಸ್ಪತ್ರೆ ಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

Advertisement

ನಾಡದ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭ ಗೊಂಡಿದ್ದು 1978ರಲ್ಲಿ. ಇದು ಹಳೆಯ ಕಟ್ಟಡ ದಲ್ಲೇ ಕಾರ್ಯಾಚರಿಸುತ್ತಿದೆ. ಆಸ್ಪತ್ರೆಗೆ ಹೊಸದಾದ ಸುಸಜ್ಜಿತವಾದ ಕಟ್ಟಡದ ಅಗತ್ಯವಿದೆ. ಇದಲ್ಲದೆ ಒಟ್ಟು ಮಂಜೂರಾದ ಹುದ್ದೆಗಳ ಪೈಕಿ ಶೇ. 60ರಷ್ಟು ಹುದ್ದೆಗಳು ಖಾಲಿಯಿದ್ದು, ಇದರ ಭರ್ತಿಗೂ ತುರ್ತಾಗಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.

ಉತ್ತಮ ಸೇವೆ
ಕಟ್ಟಡ ಸಮಸ್ಯೆ, ಸಿಬಂದಿ ಕೊರತೆ ಮಧ್ಯೆ ಇರುವಂತಹ ವೈದ್ಯರು ಹಾಗೂ ಇತರೆ ಸಿಬಂದಿಯ ನಿರಂತರ ಸೇವೆಯಿಂದಾಗಿ ಜನರಿಗೆ ಉತ್ತಮ ಸೇವೆ ಲಭ್ಯವಾಗುತ್ತಿದೆ. ಹಾಗಾಗಿ ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಗೆ ಒಳಪಡುವ ಜನರಲ್ಲದೆ ಇತರೆಡೆಗಳಿಂದಲೂ ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಾರೆ.

5 ಉಪಕೇಂದ್ರಗಳು
ನಾಡ ಪಾ. ಆ. ಕೇಂದ್ರದ ವ್ಯಾಪ್ತಿಯಲ್ಲಿ ನಾಡ ಎ ಮತ್ತು ಬಿ, ಹಡವು, ಸೇನಾಪುರ, ಡಾಕರೆ ಉಪ ಆರೋಗ್ಯ ಕೇಂದ್ರಗಳು ಬರುತ್ತವೆ. ಒಟ್ಟಾರೆ ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ 2011ರ ಜನಗಣತಿ ಪ್ರಕಾರ 12,038 ಜನಸಂಖ್ಯೆಯಿದೆ. ಈಗ ಇನ್ನೂ ಹೆಚ್ಚಾಗಿದೆ. ಕೊರೊನಾದ ಬಳಿಕ ದಿನವೊಂದಕ್ಕೆ ರೋಗಿಗಳ ಸಂಖ್ಯೆ 60 ರಿಂದ 70 ಇದೆ. ಆದರೆ ಅದಕ್ಕಿಂತ ಮೊದಲು ಇಲ್ಲಿಗೆ ದಿನಕ್ಕೆ
100 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರು. ಮರವಂತೆ, ಆಲೂರು, ಹಕ್ಲಾಡಿಯಿಂದಲೂ ಜನರು ಚಿಕಿತ್ಸೆಗೆ ಬರುತ್ತಾರೆ. ಹಾಗಾಗಿ ಮೇಲ್ದರ್ಜೆಗೇರಿಸಿದರೆ ಅನುಕೂಲ ವಾಗುತ್ತದೆ ಎನ್ನುವುದು ಜನರ ಅಭಿಪ್ರಾಯ.

17 ರಲ್ಲಿ 6 ಮಾತ್ರ ಭರ್ತಿ
ನಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಟ್ಟು 17 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ ಭರ್ತಿಯಾಗಿರುವುದು ಕೇವಲ 6 ಮಾತ್ರ. ಉಳಿದಂತೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಇಬ್ಬರು ವೈದ್ಯರ ಪೈಕಿ ಒಂದು ಹುದ್ದೆ ಮಾತ್ರ ಭರ್ತಿ, ಉಪ ಕೇಂದ್ರಗಳ ಆರೋಗ್ಯ ಕಾರ್ಯಕರ್ತರ 5 ರ ಪೈಕಿ 3 ಭರ್ತಿ, ಫಾರ್ಮಾಸಿಸ್ಟ್‌ ಖಾಲಿಯಿದೆ. ಲ್ಯಾಬ್‌ ಟೆಕ್ನೀಶಿಯನ್‌ ಎರಡು ಹುದ್ದೆ ಪೈಕಿ ಒಂದು ಹೊರಗುತ್ತಿಗೆ, ಮತ್ತೂಂದು ಖಾಲಿಯಿದೆ. ಗ್ರೂಪ್‌ ಡಿ 2 ರ ಪೈಕಿ 1 ಖಾಲಿಯಿದೆ. ಇನ್ನು ಸ್ಟಾಫ್‌ ನರ್ಸ್‌ ಹುದ್ದೆ ಇಲ್ಲಿಗೆ ಮಂಜೂರಾಗಲೇ ಇಲ್ಲ. ಎಫ್‌ಡಿಸಿ, ಕ್ಲರ್ಕ್‌, ಪುರುಷ ಆರೋಗ್ಯ ಕಾರ್ಯಕರ್ತ, ಆರೋಗ್ಯ ಶಿಕ್ಷಣ ಕೊಡುವವರ ಹುದ್ದೆ ಖಾಲಿಯಿದೆ.

Advertisement

ಮೇಲ್ದರ್ಜೆಗೆ ಪ್ರಯತ್ನ
ಸಿದ್ದಾಪುರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆರೋಗ್ಯ ಸಚಿವ ಸುಧಾಕರ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ನಾಡದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಹ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು. ಅಗತ್ಯವಿರುವ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ,, ಬೈಂದೂರು ಶಾಸಕರು

ಮನವಿ ಸಲ್ಲಿಕೆ
ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಗತ್ಯ ಸೌಕರ್ಯಗಳಿಗಾಗಿ ಸಂಬಂಧಪಟ್ಟವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಬಹುಮುಖ್ಯವಾಗಿ ಹೊಸ ಕಟ್ಟಡ ಹಾಗೂ ಖಾಲಿ ಹುದ್ದೆ ಭರ್ತಿಯಾಗಬೇಕಿದೆ.
-ಡಾ| ಚಿಕ್ಮರಿ, ನಾಡ ಆಸ್ಪತ್ರೆಯ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next