Advertisement
ಜಿಲ್ಲೆಯ ಪ್ರವಾಸಕ್ಕೆಂದು ಬಂದವರಿಗೆ ಈರುಳ್ಳಿಯನ್ನು ಹೀಗೂ ಮಾರುತ್ತಾರಲ್ಲ ಎನ್ನುವ ಅಚ್ಚರಿ ಉಂಟಾಗುವುದು ಸಹಜ. ಇವು ಗದ್ದೆಯಿಂದ ಆಗ ತಾನೇ ಕಿತ್ತು ತಂದಿದ್ದು.
Related Articles
Advertisement
ಈ ಈರುಳ್ಳಿ ಬೀಜ ತಯಾರಿಸುವುದೂ ಅತ್ಯಂತ ವಿಶಿಷ್ಟ ಹಾಗೂ ವಿಚಿತ್ರ ಪದ್ಧತಿ. ಈರುಳ್ಳಿ ಹೂಗಳಿಂದ ಸಂಗ್ರಹಿಸಿದ ಬೀಜವನ್ನು ಬೇಸಿಗೆಯಲ್ಲಿ ಚೆನ್ನಾಗಿ ಒಣಗಿಸಿ ನಂತರ ಅದಕ್ಕೆ ಬೆಳಕು ಸೋಕದಂತೆ ಕಪ್ಪು ಬಟ್ಟೆಯಲ್ಲಿ ಸುತ್ತಿ ಮಣ್ಣಿನ ಪಾತ್ರೆಯೊಳಗೆ ಸಂರಕ್ಷಣೆ ಮಾಡಿಡುತ್ತಾರೆ. ಮಡಿ ತಯಾರಿಸಿದ ನಂತರವೇ ಬೀಜ ಹೊರತೆಗೆಯುತ್ತಾರೆ.
ನಾಟಿ ಮಾಡಿದ ಸಸಿಗಳಿಗೆ ಧಕ್ಕೆಯಾಗದಂತೆ ನಿತ್ಯ ಬೆಳಗಿನ ಜಾವಕ್ಕೆ ಎದ್ದು ಕೊಡದಲ್ಲಿ ಮೆಲ್ಲಗೆ ನೀರುಣಿಸುವುದೇ ದೊಡ್ಡ ಸಾಹಸ. ಈರುಳ್ಳಿ ಕೀಳುವವರೆಗೂ ರೈತನಿಗೆ ಸರಿಯಾಗಿ ನಿದ್ದೆಯೂ ಇರುವುದಿಲ್ಲ.
ಗದ್ದೆಯಲ್ಲಿ ಬೆಳೆದ ಈರುಳ್ಳಿಗೆ ಪಕ್ಕದ ಹೆದ್ದಾರಿ ಬದಿಯೇ ದೊಡ್ಡ ಮಾರುಕಟ್ಟೆ. ಹೀಗಾಗಿ ಇದನ್ನು ಮಾರಲು ಸಮಸ್ಯೆಯೇ ಇಲ್ಲ. ಮಾರ್ಚ್‌ನಿಂದ ಏಪ್ರಿಲ್ ಮುಗಿಯುವ ತನಕವೂ ಅಳ್ವೆಕೋಡಿಯಿಂದ ಹಂದಿಗೋಣ ವರೆಗಿನ ಸುಮಾರು ಮೂರು ಕಿ.ಮೀ. ಹೆದ್ದಾರಿ ಬದಿಯಲ್ಲಿ ಎಲ್ಲಿ ನೋಡಿದರೂ ಈರುಳ್ಳಿಯೇ ಕಂಗೊಳಿಸುತ್ತದೆ.
ಇಲ್ಲಿ ಮಧ್ಯವರ್ತಿಗಳ ಜೊತೆ ಕೆಲ ರೈತರೂ ಹೆದ್ದಾರಿ ಬದಿಗಿಟ್ಟು ಈರುಳ್ಳಿ ಮಾರಾಟ ಮಾಡುತ್ತಾರೆ. ಹಾಲಿ ಇದರ ಬೆಲೆ ಕಿಲೋಗೆ 75 ರಿಂದ 80 ರೂ. ಇದೆ. ಮಳೆಗಾಲದಲ್ಲಿ ಇದು ಹಾಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸಂಗ್ರಹಣೆಗೆ ರೈತರು ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಜೊತೆಗೆ ಇತ್ತೀಚೆಗಿನ ವ ರ್ಷಗಳಲ್ಲಿ ಕಾಣಿಸಿಕೊಂಡ ಹಾವು ಸುಳಿ ರೋಗದಿಂದಾಗಿ ಈರುಳ್ಳಿ ಬೆಳೆಯನ್ನು ಬೆಳೆಯವುದು ಕಷ್ಟ ಎನ್ನುತ್ತಾರೆ ಬೆಳೆಗಾರರು. ಇನ್ನು ಹಲವೆಡೆಗಳಲ್ಲಿ ಅದನ್ನು ವ್ಯವಸ್ಥಿತವಾಗಿ ಬೆಂಕಿಯ ಧಗೆ ತಾಗುವ ಒಲೆಯ ಮೇಲ್ಭಾಗದಲ್ಲಿ ಕಟ್ಟಿ ನೇತುಹಾಕಿ ಸಂಗ್ರಹಿಸಿಟ್ಟುಕೊಂಡು ವರ್ಷವಿಡೀ ಬಳಸುತ್ತಾರೆ.
ಹಾವು ಸುಳಿ ರೋಗ: ಕಳೆದ ಕೆಲ ವರ್ಷಗಳಿಂದ ಸಸಿ ಒಣಗಿ ಹಾವು ಸುಳಿ ರೋಗ ಈರುಳ್ಳಿಗೆ ತಗುಲಿ ಬೆಳೆ ಸಾಕಷ್ಟು ಪ್ರಮಾಣ ಕುಂಠಿತವಾಗುತ್ತಿದೆ. ಸಾವಯವ ಗೊಬ್ಬರದ ಬಳಕೆಯ ಪ್ರಮಾಣ ಕಡಿಮೆಯಾಗಿ ರೋಗ ತಡೆಯುವ ಶಕ್ತಿ ಕುಗ್ಗಿದೆ. ಸಾವಯವ ಗೊಬ್ಬರ ಬಳಕೆ ಹಾಗೂ ಸರಿಯಾದ ಬೀಜೋಪಚಾರದಿಂದ ಮತ್ತೆ ಅಂಥ ಶಕ್ತಿ ಪಡೆಯಬಹುದು ಎಂದು ಧಾರವಾಡ ಕೃಷಿ ವಿವಿ ತಜ್ಞರು ತಿಳಿಸಿದ್ದಾರೆ. ನೂರಾರು ವರ್ಷಗಳ ಪರಂಪರೆಯ ಅಳ್ವೆಕೋಡಿ ಈರುಳ್ಳಿಯ ಬೆಡಗು, ಬೇಡಿಕೆ, ರುಚಿ ಉಳಿಸಿಕೊಳ್ಳಲು ಅದರ ಸಾಂಪ್ರದಾಯಿಕ ಕೃಷಿಯೊಂದೇ ಏಕೈಕ ಮಾರ್ಗವಾಗಿದೆ.
ಹೊರ ರಾಜ್ಯಗಳಲ್ಲೂ ಬೇಡಿಕೆ: ತಾಲೂಕಿನ ಅಳ್ವೆಕೊಡಿಯ ಈರುಳ್ಳಿಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ಸೇರಿದಂತೆ ಹಲವೆಡೆಗಳಿಂದ ಬೇಡಿಕೆ ಇದೆ. ರಾಜ್ಯದಲ್ಲಿಯೂ ಇದರ ಬೇಡಿಕೆ ಹೆಚ್ಚಿದೆ.
-ಮಂಜುನಾಥ ದೀವಗಿ