Advertisement

ಜನತಾ ಥಿಯೇಟರ್‌ ಸ್ಥಾಪನೆಗೆ ಹೆಚ್ಚಿದ ಬೇಡಿಕೆ

08:55 AM Oct 14, 2017 | Karthik A |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ತುಳು ಸಿನೆಮಾಗಳ ಹವಾ ಹೆಚ್ಚಾಗುತ್ತಿದ್ದಂತೆ, ಸದಭಿರುಚಿಯ ಸಿನೆಮಾಗಳ ಪ್ರದರ್ಶನಕ್ಕೆ ಪ್ರಸ್ತುತ ಇರುವ ಚಿತ್ರಮಂದಿರಗಳಿಂದ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಈಗ ‘ಜನತಾ ಥಿಯೇಟರ್‌’ ಸ್ಥಾಪನೆಗೆ ಬೇಡಿಕೆ ಕೇಳಿ ಬಂದಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ತುಳು ಚಿತ್ರರಂಗವೂ ಬೆಳೆಯುತ್ತಿದ್ದು, ಚಿತ್ರಮಂದಿರಗಳ ಕೊರತೆ ಕಾಡುತ್ತಿದೆ. ಚಿತ್ರದ ನಿರ್ಮಾಪಕ -ನಿರ್ದೇಶಕರು ಕೂಡ ಕೈಯಲ್ಲಿ ಚಿತ್ರ ಹಿಡಿದುಕೊಂಡು ಬಿಡುಗಡೆಗೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ತುಳು ಸಿನೆಮಾಗಳಿಗೆ ದಿನದಲ್ಲಿ ಒಂದೆರಡು ಶೋಗಳಿಗಷ್ಟೇ ಅವಕಾಶ ದೊರೆಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಚಲನಚಿತ್ರ ಮಂದಿರಗಳಿದ್ದರೂ, ತುಳು ಚಲನಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂಬ ನೋವು-ಅಸಮಾಧಾನ ಕಲಾವಿದರು ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಇದೆ. ಇದಕ್ಕೊಂದು ಶಾಶ್ವತ ಪರಿಹಾರ ಅಂದರೆ ಜನತಾ ಥಿಯೇಟರ್‌ ನಿರ್ಮಾಣಗೊಳ್ಳಬೇಕು ಎನ್ನುವ ಬೇಡಿಕೆ ಜೋರಾಗುತ್ತಿದೆ.

ಕರಾವಳಿಗೆ ಅಗತ್ಯ
ಕರಾವಳಿಯ ಅನೇಕ ಚಿತ್ರಮಂದಿರಗಳು ತುಳು ಚಲನಚಿತ್ರ ಬಿಡುಗಡೆಗೆ ಹಿಂದೇಟು ಹಾಕುತ್ತಾರೆ. ಹೆಚ್ಚಿನ ಬಾಡಿಗೆಯನ್ನೂ ವಿಧಿಸುತ್ತಿದ್ದಾರೆ. ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ತಯಾರಿದ್ದರೂ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಸಣ್ಣ ಪೇಟೆಯಿಂದಲೂ ಮಂಗಳೂರು ನಗರಕ್ಕೇ ಚಿತ್ರ ವೀಕ್ಷಣೆಗೆ ಬರಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಣ್ಣ ಪೇಟೆ – ಗ್ರಾಮೀಣ ಪ್ರದೇಶಗಳಲ್ಲೂ ಜನತಾ ಚಿತ್ರಮಂದಿರಗಳು ತಲೆಯೆತ್ತಿದರೆ ಸಿನೆಮಾ ಮಂದಿರದ ಸಮಸ್ಯೆ ಉದ್ಭವಿಸದು ಎಂಬ ಅಭಿಪ್ರಾಯವಿದೆ. 

ಏನಿದು ಜನತಾ ಥಿಯೇಟರ್‌?
ಕಡಿಮೆ ದರದಲ್ಲಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸುವ ವೇದಿಕೆಯೇ ಜನತಾ ಥಿಯೇಟರ್‌. ರಾಜ್ಯ ಸರಕಾರವು ಪ್ರಸಕ್ತ ಬಜೆಟ್‌ನಲ್ಲಿ ಜನತಾ ಥಿಯೇಟರ್‌ ನಿರ್ಮಾಣಕ್ಕೆ ಪ್ರೋತ್ಸಾಹ ಧನ ಘೋಷಿಸಿತ್ತು. ಚಿತ್ರಮಂದಿರದಲ್ಲಿ 200 ಆಸನವುಳ್ಳ ಏಕಪರದೆ ಅಥವಾ 150 ಆಸನವುಳ್ಳ ಬಹುಪರದೆ ಇರಲಿದೆ. ಹೊಸದಾಗಿ ನಿರ್ಮಾಣ ಮಾಡುವ ಏಕಪರದೆ ಜನತಾ ಚಿತ್ರಮಂದಿರಗಳಿಗೆ 50 ಲಕ್ಷ ರೂ. ಮತ್ತು ಬಹುಪರದೆ ಚಿತ್ರಮಂದಿರಕ್ಕೆ ಗರಿಷ್ಠ 50 ಲಕ್ಷ ರೂ. ಪ್ರೋತ್ಸಾಹ ಧನ ಸಿಗಲಿದೆ.

ಕರಾವಳಿಯಲ್ಲಿ ತುಳು ಚಲನ ಚಿತ್ರಕ್ಕೆ ದೊಡ್ಡ ಮಾರ್ಕೆಟ್‌ ಇದೆ. ವೀಕ್ಷಕ ವರ್ಗವೂ ಇದೆೆ. ಆದರೆ, ಚಿತ್ರ ಮಂದಿರದ ಸಮಸ್ಯೆ ಇಂದು ನಿನ್ನೆಯದಲ್ಲ. ಸಿನೆಮಾಗಳು ಜಾಸ್ತಿಯಾಗುತ್ತಿರುವುದರಿಂದ ಚಿತ್ರಮಂದಿರಗಳ ಕೊರತೆಯೂ ಎದುರಾಗಿದೆ. ಹೀಗಿರುವಾಗ, ಜನತಾ ಥಿಯೇಟರ್‌ಗಳನ್ನು ಅಲ್ಲಲ್ಲಿ ಪ್ರಾರಂಭಿಸಿದರೆ, ಈ ರೀತಿಯ ಕೊರತೆ ನೀಗಿಸಬಹುದು. 
– ಸೂರಜ್‌ ಶೆಟ್ಟಿ , ತುಳು ಸಿನೆಮಾ ನಿರ್ದೇಶಕ 

Advertisement

ತುಳು ಚಲನಚಿತ್ರ ಬೆಳೆಯುವ ನಿಟ್ಟಿನಲ್ಲಿ ಜನತಾ ಚಿತ್ರಮಂದಿರ ಬೇಕು. ಈ ಉದ್ದೇಶದಿಂದ ಸಮಾಜದ ಕೆಲ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ ಸಮಾಲೋಚಿಸುತ್ತೇನೆ. ಕರಾವಳಿಯ ಅನೇಕ ಚಿತ್ರಮಂದಿರಗಳು ಈಗಾಗಲೇ ಮುಚ್ಚಿವೆ. ಕೆಲವು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರವಿದ್ದಾಗ ತುಳು ಚಿತ್ರಕ್ಕೆ ಅವಕಾಶ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ 200 ಆಸನವುಳ್ಳ ಜನತಾ ಚಿತ್ರಮಂದಿರದ ಅಗತ್ಯವಿದೆ.
– ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಚಲನಚಿತ್ರ ನಿರ್ದೇಶಕ

ಕರಾವಳಿ ಪ್ರದೇಶಕ್ಕೆ ಜನತಾ ಥಿಯೇಟರ್‌ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಎರಡರಿಂದ ಮೂರು ಜನತಾ ಚಿತ್ರಮಂದಿರವನ್ನು ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದ್ದೇನೆ. ನಿರ್ವಹಣೆ ದೃಷ್ಟಿಯಿಂದ ಜನತಾ ಚಿತ್ರಮಂದಿರಗಳಲ್ಲಿ ಉಳಿದ ಭಾಷೆ ಚಿತ್ರ ಪ್ರದರ್ಶನಕ್ಕೂ ಅವಕಾಶ ನೀಡಬೇಕು.’
– ಪ್ರಕಾಶ್‌ ಪಾಂಡೇಶ್ವರ, ಚಲನಚಿತ್ರ ನಿರ್ಮಾಪಕ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next