Advertisement

ಒಳಚರಂಡಿಗೆ ಬೇಡಿಕೆ,ಚರಂಡಿಯಲ್ಲಿ ನೀರು ಬಾಕಿ

06:20 AM Jun 12, 2018 | Team Udayavani |

ಕುಂದಾಪುರ: ಕಳೆದ ವರ್ಷ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ನಿಂತಿತ್ತು. ರಾಮ ಕ್ಷತ್ರಿಯ ಯುವಕ ಮಂಡಲದ ಸುವರ್ಣ ಮಂಟಪ ಎದುರಿನ ರಸ್ತೆಯೆಲ್ಲ ನೀರು.  ಈ ಬಾರಿ ಅಲ್ಲೊಂದು ಚರಂಡಿಯಾಗಿದೆ. ಆದರೆ ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ಬದಲಾಗಿ ಸಂಗ್ರಹವಾಗಿರುತ್ತದೆ. ಕಾರಣ ಅಸಮರ್ಪಕ ಕಾಮಗಾರಿ. ಮಳೆ ಬಂದರೆ ಮಾತ್ರ ಇದರಲ್ಲಿ ಸಂಗ್ರಹವಾದ ನೀರು ಹರಿಯುತ್ತದೆ. ಇಲ್ಲದಿದ್ದರೆ ಆಚೀಚೆ ಮನೆಯಿಂದ ಬಂದ ನೀರೆಲ್ಲ ಅಲ್ಲೇ ಬಾಕಿ. ವಿಠಲ ನೇತ್ರಾಲಯ ರಸ್ತೆಯಲ್ಲಿ  ಚರಂಡಿಯೇ ಇಲ್ಲ. 

Advertisement

ಸ್ವಚ್ಛತೆ
ಇಂತದ್ದೊಂದು ಸ್ಥಿತಿ ಕಂಡದ್ದು “ಉದಯವಾಣಿ’ಯ “ವಾರ್ಡ್‌ನಲ್ಲಿ ಮಳೆಗಾಲ’ ಸರಣಿಗಾಗಿ ಈಸ್ಟ್‌ ಬ್ಲಾಕ್‌ ವಾರ್ಡ್‌ಗೆ ಭೇಟಿ ಮಾಡಿದಾಗ. ಮುಖ್ಯ ರಸ್ತೆಯಿಂದ ಆರಂಭಿಸಿ ರಾಮಚಂದ್ರ ಕಲ್ಯಾಣಮಂಟಪ, ಚಿಕ್ಕಮ್ಮನಸಾಲ್‌ ರಸ್ತೆ, ಪೊಲೀಸ್‌ ಕ್ವಾಟರ್ಸ್‌, ರಕ್ತೇಶ್ವರಿ ದೇವಸ್ಥಾನ ಇಲ್ಲೆಲ್ಲ ಅಂತಹ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಕಂಡು ಬಂದಿಲ್ಲ. ಅನೇಕ ಕಡೆ ಚರಂಡಿ ಇದೆ. ಈಚೆಗೆ ಪುರಸಭೆ ವತಿಯಿಂದ ವಾರ್ಡ್‌ನಲ್ಲಿ ಸ್ವಚ್ಛತೆ ಮಾಡಲಾಗಿದೆ. ಸತ್ಯಸಾಯಿ ಸೇವಾ ಸಮಿತಿ ವತಿಯಿಂದಲೂ ಪ್ರತಿ ವರ್ಷ ಸ್ವತ್ಛತಾ ಕಾರ್ಯ ನಡೆಯುತ್ತದೆ. ಆದರೆ ಜನರೂ ಒಂದಷ್ಟು ಸ್ವಚ್ಛತೆ ಕುರಿತು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಎಸೆದ ಕಸವೇ ಸಂಗ್ರಹವಾಗಿ ಚರಂಡಿ ಬ್ಲಾಕ್‌ ಆಗುತ್ತದೆ. ಮತ್ತೆ ಜನಪ್ರತಿನಿಧಿಯನ್ನೂ, ಆಡಳಿತವನ್ನೂ ದೂರಬೇಕಾಗುತ್ತದೆ.


ನಿವೇಶನ ಇಲ್ಲ
ಖಾರ್ವಿಕೇರಿಯ ನೂರಾರು ಮಂದಿಗೆ ನಿವೇಶನವೇ ಇಲ್ಲ. ಈ ಕುರಿತು ಸಾಕಷ್ಟು ಹೋರಾಟಗಳಾಗಿವೆ. ಪುರಸಭೆಗೂ ಬೇಡಿಕೆ ಪಟ್ಟಿ ಮಂಡಿಸಲಾಗಿದೆ. ಆದರೆ ಬೇಡಿಕೆ ಈಡೇರಿಲ್ಲ. ಸರಕಾರ ಅಸ್ತಿತ್ವಕ್ಕೆ ತಂದ 94ಡಿ ಕಾನೂನು ಪ್ರಕಾರ ಇರುವವನೇ ಮನೆಯೊಡೆಯ ಕಾನೂನಿನಂತೆ ಇವರಿಗೆಲ್ಲ ಮನೆ ನಿವೇಶನ ದೊರೆಯಬೇಕಿದೆ. ಅಚ್ಚರಿ ಎಂದರೆ ಈ ಪ್ರದೇಶದ ಪುರಸಭಾ ವಾರ್ಡ್‌ ಸದಸ್ಯ ರವಿರಾಜ್‌ ಖಾರ್ವಿ ಅವರೇ ನಿವೇಶನ ರಹಿತರು. ಹಾಗಾಗಿ ನಿವೇಶನರಹಿತರ ಹೋರಾಟದ ಜತೆಗೆ ಅವರೂ ನೇತೃತ್ವ ವಹಿಸಿ ನಿವೇಶನ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ಮತ್ತೂಂದಷ್ಟು ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಖಾಸಗಿ ಜಾಗದಲ್ಲಿ ಪೈಪ್‌ಲೈನ್‌ ಹೋಗಲು ಅಡ್ಡಿ ಇರುವ ಕಾರಣ ಜನತೆಗೆ ಕುಡಿಯಲು ನೀರು ಸಿಕ್ಕಿಲ್ಲ. 

ಕಾಂಕ್ರಿಟ್‌ ರಸ್ತೆ
ಈ ವಾರ್ಡಿನ 100 ಶೇ.ದಷ್ಟು ರಸ್ತೆಗಳೂ ಕಾಂಕ್ರಿಟ್‌ಮಯವಾಗಿವೆ. ಅದೇ ಈ ವಾರ್ಡಿನ ಹೆಗ್ಗಳಿಕೆ. ಜನನಿಬಿಡ ಪ್ರದೇಶವಾದ ಇಲ್ಲಿ ವಿದ್ಯುದ್ದೀಪದ ಸಮಸ್ಯೆ ಒಂದೆರಡು ಕಡೆ ಕಂಡುಬಂತು. ಉಳಿದಂತೆ ಹೆಚ್ಚಿನ ಕಡೆ ಅದರ ಸಮಸ್ಯೆಯೂ ಇಲ್ಲ. 1,200ರಷ್ಟು ಜನ ಸಂಖ್ಯೆಯಿದ್ದು 400ರಷ್ಟು ಮನೆಗಳಿವೆ.

ಸ್ಪಂದನೆ ಇದೆ
ನಮ್ಮ ಮನವಿಗೆ ಪುರಸಭಾ ಸದಸ್ಯರು ಸ್ಪಂದಿಸುತ್ತಾರೆ. ಕಳೆದ ಬಾರಿ ನೀರು ನಿಂತು ಸಮಸ್ಯೆಯಾದಲ್ಲಿ ಈ ಬಾರಿ ಕಾಂಕ್ರಿಟ್‌ ಚರಂಡಿ ಮಾಡಲಾಗಿದೆ.  
– ರಾಮಚಂದ್ರ ಬಿ.ಎನ್‌. ಸ್ಥಳೀಯರು 

ಚರಂಡಿ ವ್ಯವಸ್ಥೆ ಆಗಬೇಕಿದೆ 
ಮಳೆಗಾಲ ಬೇಸಗೆ ಎಂದಿಲ್ಲ. ಏಕೆಂದರೆ ಇಲ್ಲಿ ಒಳಚರಂಡಿಯೇ ಇಲ್ಲ. ತುರ್ತಾಗಿ ವಿಠಲ ನೇತ್ರಾಲಯ ರಸ್ತೆ ಬದಿ ಚರಂಡಿ ವ್ಯವಸ್ಥೆ ಆಗಬೇಕಿದೆ. 
– ಈಶ್ವರ್‌ ಯಾದವ್‌, ಸ್ಥಳೀಯರು 

Advertisement

ಚರಂಡಿಯದ್ದು ಅಷ್ಟು ಸಮಸ್ಯೆ ಇಲ್ಲ 
ಮಳೆಗಾಲದಲ್ಲಿ ಒಮ್ಮೆ ತುಂಬಿದರೂ ಅನಂತರ ಸರಿಹೋಗುತ್ತದೆ. ಚರಂಡಿಯದ್ದು ಅಷ್ಟು ಸಮಸ್ಯೆ ಇಲ್ಲ. 
– ಮಂಜುನಾಥ್‌ ಖಾರ್ವಿ, ಸ್ಥಳೀಯರು

ಸಮಸ್ಯೆಗೆ ಅರ್ಜಿ ಕೊಟ್ಟ ಕೂಡಲೇ ಪರಿಹಾರ
ನನಗೆ 6 ವರ್ಷದಿಂದ ವಿದ್ಯುತ್‌ ಇರಲಿಲ್ಲ. ಈಗ ಸದಸ್ಯರ ಸಹಕಾರದಿಂದ ಸಮಸ್ಯೆ ಪರಿಹಾರವಾಗಿದೆ. ಸಮಸ್ಯೆಗೆ ಅರ್ಜಿ ಕೊಟ್ಟ ಕೂಡಲೇ ಪರಿಹಾರವಾಗುತ್ತಿದೆ.  
– ಶ್ರೀನಿವಾಸ ಶೇಟ್‌, ಸ್ಥಳೀಯರು

ನೀರಿನ ಸಮಸ್ಯೆ ಪರಿಹಾರಕ್ಕೆ ಯತ್ನ
ನಿವೇಶನ ರಹಿತರ ಸಮಸ್ಯೆ ಇದ್ದು ಇದಕ್ಕಾಗಿ ಹೋರಾಡಲಾಗುತ್ತಿದೆ.  ವಾರ್ಡ್‌ನ ಎಲ್ಲ ರಸ್ತೆಗಳೂ ಕಾಂಕ್ರೀಟ್‌ ಆಗಿದ್ದು ಖಾಸಗಿ ಜಾಗದಲ್ಲಿ ಪೈಪ್‌ಲೈನ್‌ ಹೋಗುವಂತಹ ಕಡೆ ನೀರಿನ ಸಮಸ್ಯೆ ಇದೆ. ಪರಿಹಾರಕ್ಕೆ ಸಾಧ್ಯವಾದಷ್ಟು ಯತ್ನಿಸುತ್ತಿದ್ದೇನೆ. 
– ರವಿರಾಜ್‌ ಖಾರ್ವಿ, ಸದಸ್ಯರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next