ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕ ಧ್ವಜಕ್ಕಾಗಿ ಕೂಗು ಕೇಳಿಬಂದಿರುವ ಹಿನ್ನಲೆಯಲ್ಲಿ ಸರ್ಕಾರ 9 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ವಿಶ್ವ ಕನ್ನಡ ಸಮ್ಮೇಳನದ ಕುರಿತಾಗಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಿತಿ ರಚಿಸಿರುವ ಕುರಿತು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸಮಿತಿಯ ನೇತೃತ್ವ ವಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಸಾಪ ಅಧ್ಯಕ್ಷ ಮನು ಬಳಿಗಾರ್ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಕೇಳುವುದು ಸಂವಿಧಾನದಲ್ಲಿ ಇಲ್ಲ. ಆದರೆ ಜನರ ಅಭಿಪ್ರಾಯವನ್ನು ಪುರಸ್ಕರಿಸುವುದು ಸರ್ಕಾರದ ಕರ್ತವ್ಯ ಹೀಗಾಗಿ ಸಮಿತಿ ರಚಿಸಲಾಗಿದೆ ಎಂದರು.
ರಾಷ್ಟ್ರಧ್ವಜದ ಹೊರತಾಗಿ 370 ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಪ್ರತ್ಯೇಕ ಧ್ವಜ ಇದೆ. ಕರ್ನಾಟಕದಲ್ಲಿ ಕೆಂಪು ಮತ್ತು ಹಳದಿ ಬಾವುಟವನ್ನೇ ಧ್ವಜವನ್ನಾಗಿ ಬಳಸಲಾಗುತ್ತಿದ್ದು ಆದರೆ ಅಧಿಕೃತ ಮಾನ್ಯತೆ ಇಲ್ಲ.
ಕೆಲ ಸಾಹಿತಿಗಳು ,ಕನ್ನಡ ಪರ ಸಂಘಟನೆಗಳು ಪ್ರತ್ಯೇಕ ಧ್ವಜಕ್ಕಾಗಿ ಬೇಡಿಕೆ ಇಟ್ಟಿದ್ದು, ಸಮಿತಿ ಹಾಲಿ ಧ್ವಜವನ್ನೇ ಮಾನ್ಯ ಮಾಡಬೇಕೆ ಅಥವಾ ಹೊಸ ಧ್ವಜ ಬೇಕೆ ಎನ್ನುವ ಕುರಿತು ಸರ್ಕಾರಕ್ಕೆ ವರದಿ ನೀಡಲಿದೆ.