Advertisement

ಬೆಂಗಳೂರಿನಲ್ಲಿ ಸಣ್ಣ ಕಟ್ಟಡಗಳಿಗೆ ಹೆಚ್ಚಿದ ಬೇಡಿಕೆ ; ವರ್ಕ್‌ ಫ್ರಂ‌ ಹೋಂ ಪರಿಣಾಮ

03:25 AM Jul 21, 2020 | Hari Prasad |

ಬೆಂಗಳೂರು: ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ (ವರ್ಕ್‌ ಫ್ರಂ‌ ಹೋಂ) ಉದ್ಯೋಗಿಗಳಿಗೆ ತಕ್ಕಮಟ್ಟಿಗೆ ನೆಮ್ಮದಿ ತಂದುಕೊಟ್ಟಿದೆ ಹಾಗೂ ಕಂಪೆನಿಗಳಿಗೆ ನಿರ್ವಹಣ ವೆಚ್ಚವನ್ನೂ ಕಡಿಮೆ ಮಾಡಿದೆ.

Advertisement

ಆದರೆ ನಗರದಲ್ಲಿ ದೊಡ್ಡ ಕಂಪೆನಿಗಳು ತಮ್ಮ ಕಚೇರಿಗಳನ್ನು ಖಾಲಿ ಮಾಡುವ ‘ಟ್ರೆಂಡ್‌’ ಹೆಚ್ಚಾಗುತ್ತಿದ್ದು, ವಾಣಿಜ್ಯ ಉದ್ದೇಶಿತ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಆತಂಕ ಎದುರಾಗಿದೆ.

ಈ ಮಧ್ಯೆ, ಇದು ತಾತ್ಕಾಲಿಕ ಬೆಳವಣಿಗೆಯಾಗಿದ್ದು, ಆತಂಕಪಡಬೇಕಿಲ್ಲ ಎಂಬ ಅಭಿಪ್ರಾಯವೂ ಉದ್ಯಮ ವಲಯದಿಂದ ಕೇಳಿ ಬಂದಿದೆ.

ಕೋವಿಡ್ 19 ಕಾರಣದಿಂದ ಹತ್ತಾರು ಕಂಪೆನಿಗಳು ತಮ್ಮ ಕಚೇರಿಗಳನ್ನು ತೆರವುಗೊಳಿಸಿದ್ದು, ಸುಮಾರು 3.6 ದಶಲಕ್ಷ ಚದರಡಿಯಷ್ಟು ಜಾಗವನ್ನು ಕಟ್ಟಡಗಳ ಮಾಲಕರಿಗೆ ಹಿಂದಿರುಗಿಸಲಾಗಿದೆ.

ಪರಿಣಾಮ ವಾಣಿಜ್ಯ ಕಟ್ಟಡಗಳಲ್ಲಿ ಖಾಲಿ ಇರುವ ಜಾಗದ ಪ್ರಮಾಣ ಶೇ. 6.5ಕ್ಕೇರಿದ್ದು, 2019ರ ಇದೇ ಅವಧಿಯಲ್ಲಿ ಅದು ಶೇ. 4.8ರಷ್ಟಾಗಿತ್ತು.

Advertisement

ಕಂಪೆನಿಗಳು ಬಾಡಿಗೆ ಸಹಿತ ನಿರ್ವಹಣ ವೆಚ್ಚವನ್ನು ಕಡಿತಗೊಳಿಸುತ್ತಿವೆ. ಇದೇ ಸ್ಥಿತಿ ಮುಂದುವರಿದರೆ ಖಾಲಿ ಕಟ್ಟಡಗಳು ಇನ್ನಷ್ಟು ಏರಿಕೆಯಾಗಲಿದೆ ಎಂದು ರಿಯಲ್‌ ಎಸ್ಟೇಟ್‌ ತಜ್ಞರು ಹೇಳುತ್ತಿದ್ದಾರೆ.

ಕಂಪೆನಿಗಳು ಕಚೇರಿಗಳಿಗಾಗಿ ಬಾಡಿಗೆ ಪಡೆಯುವ ವಾಣಿಜ್ಯ ಕಟ್ಟಡಗಳ ವಹಿವಾಟು ಕಳೆದ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ, ಈ ಬಾರಿ ಶೇ. 42ರಷ್ಟು ಕುಸಿದಿದೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ವಹಿವಾಟು ಶೇ. 64ರಷ್ಟು ಇಳಿಮುಖವಾಗಿದೆ. ಅದೇ ರೀತಿ, ಬಾಡಿಗೆದಾರರಿಗಾಗಿ ಕಾಯುತ್ತಿರುವ ಕಟ್ಟಡಗಳ ಸಂಖ್ಯೆ ಏರಿಕೆಯಾಗಿದ್ದು, 2020ರ ಮೊದಲಾರ್ಧದಲ್ಲಿ ಸುಮಾರು 168.7 ದಶಲಕ್ಷ ಚದರಡಿಯಷ್ಟು ಆಫೀಸ್‌ ಕಟ್ಟಡಗಳು ಮಾರುಕಟ್ಟೆಯಲ್ಲಿ ಖಾಲಿ ಇವೆ. ಕಳೆದ ವರ್ಷ ಇದೇ ಅವಧಿಯಲ್ಲಿ 156.3 ದಶಲಕ್ಷ ಚದರಡಿ ಖಾಲಿ ಇತ್ತು.

ಪರಿಣಾಮ ಹಲವು
ಈ ವರ್ಕ್‌ ಫ್ರಂ ಹೋಂ ಪ್ರವೃತ್ತಿಯಿಂದ ಹಲವು ಪರಿಣಾಮಗಳಾಗಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆ, ಕಚ್ಚಾ ಸಾಮಗ್ರಿಗಳ ಅಲಭ್ಯತೆ, ಸ್ವಾಧೀನಾನುಭವ ಪತ್ರ ಪಡೆಯುವಲ್ಲಿ ವಿಳಂಬ ಇತ್ಯಾದಿಗಳಿಂದ ನೂರಾರು ಪ್ರಾಜೆಕ್ಟ್ ಗಳು ಅಪೂರ್ಣಗೊಂಡಿವೆ. ನೈಟ್‌ ಫ್ರ್ಯಾಂಕ್‌ ನಡೆಸಿದ ಅಧ್ಯಯನದ ಪ್ರಕಾರ ಯೋಜನೆಗಳನ್ನು ಪೂರ್ಣಗೊಳಿಸಲು ಶೇ. 48ರಷ್ಟು ಹಿನ್ನಡೆ ಆಗಿದೆ. ಅಂದರೆ 2019ರ ಮೊದಲಾರ್ಧದಲ್ಲಿ 7.6 ದಶಲಕ್ಷ ಚ.ಅ.ಯಷ್ಟು ವಾಣಿಜ್ಯ ಕಟ್ಟಡಗಳ ಜಾಗ ನಿರ್ಮಾಣಗೊಂಡಿತ್ತು. 2020ರ ಮೊದಲಾರ್ಧದಲ್ಲಿ 4 ದಶಲಕ್ಷ ಚದರಡಿ ಮಾತ್ರ ನಿರ್ಮಿಸಲು ಸಾಧ್ಯವಾಗಿದೆ.

ಕಂಪೆನಿಗಳ ಪಾಲು
ಈ ಮಧ್ಯೆ ತೆರವಾಗುತ್ತಿರುವ ವಾಣಿಜ್ಯ ಕಟ್ಟಡಗಳ ಜಾಗವನ್ನು ಉತ್ಪಾದನ ಕ್ಷೇತ್ರ, ಬ್ಯಾಂಕಿಂಗ್‌, ಹಣಕಾಸು ಹಾಗೂ ವಿಮಾ ಕಂಪೆನಿಗಳು ಆಕ್ರಮಿಸಿಕೊಳ್ಳುತ್ತಿರುವುದು ವಿಶೇಷ. ಫೋನ್‌ ಪೇ, ಫ‌ಸ್ಟ್‌ ಅಬುಧಾಬಿ ಬ್ಯಾಂಕ್‌, ಬಿಎನ್‌ಪಿ ಪರಿಭಾಸ್‌, ಫೆಡೆಲಿಟಿ ನ್ಯಾಶನಲ್‌ ಫೈನಾನ್ಶಿಯಲ್‌ನಂತಹ ಕಂಪೆನಿಗಳು ಹಾಗೂ ವಿವಿಧ ಉತ್ಪಾದನ ಕ್ಷೇತ್ರಗಳು ದಾಸ್ತಾನಿಗಾಗಿ ವಾಣಿಜ್ಯ ಕಟ್ಟಡಗಳನ್ನು ಬಾಡಿಗೆಗೆ ಪಡೆಯುತ್ತಿರುವುದು ಕಂಡುಬಂದಿದೆ ಎನ್ನುತ್ತಾರೆ ತಜ್ಞರು.
‘ವರ್ಕ್‌ ಫ್ರಂ ಹೋಂನಿಂದ ಬೇಡಿಕೆ ಕಡಿಮೆ ಆಗಿದ್ದು, ಇದು ತಾತ್ಕಾಲಿಕ ಬೆಳವಣಿಗೆ. ಕೊರೊನಾ ಮುಗಿದ ಬಳಿಕ ಮತ್ತೆ ವಾಣಿಜ್ಯ ಕಟ್ಟಡಗಳಿಗೆ ಬೇಡಿಕೆ ಬರಲಿದೆ’ ಎಂದು ಕ್ರೆಡಾಯ್‌ ಬೆಂಗಳೂರು ಘಟಕದ ಅಧ್ಯಕ್ಷ ಸುರೇಶ್‌ ಹರಿ ಹೇಳುತ್ತಾರೆ.

ಕಂಪೆನಿಗಳಲ್ಲಿ ಸೀಮಿತ ಸಿಬಂದಿ
ಈ ಹಿಂದೆ ತಿಂಗಳು ಚದರಡಿಗೆ 5ರಿಂದ 10 ಸಾವಿರ ರೂ. ಬಾಡಿಗೆ ಇರುವ ಜಾಗಗಳಲ್ಲಿ ಕಚೇರಿಗಳನ್ನು ತೆರೆಯುತ್ತಿದ್ದ ಕಂಪೆನಿಗಳು ಈಗ ಸೀಮಿತ ಸಿಬಂದಿಯೊಂದಿಗೆ ಚದರಡಿಗೆ 2ರಿಂದ 4 ಸಾವಿರ ರೂ. ಬಾಡಿಗೆ ಇರುವ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಸಂಕೀರ್ಣಗಳಲ್ಲಿ ಕಚೇರಿಗಳನ್ನು ಆರಂಭಿಸುತ್ತಿವೆ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವಲಪರ್ ಸಂಘಗಳ ಒಕ್ಕೂಟ (ಕ್ರೆಡಾಯ್‌) ಬೆಂಗಳೂರು ಘಟಕದ ಉಪಾಧ್ಯಕ್ಷ ಪ್ರದೀಪ್‌ ರಾಯ್ಕರ್‌ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next