Advertisement

ಬೈಂದೂರಿನಲ್ಲಿ ಕೋವಿಡ್‌ ಆಸ್ಪತ್ರೆ ಸ್ಥಾಪನೆಗೆ ಬೇಡಿಕೆ

08:32 PM Oct 01, 2020 | mahesh |

ಕುಂದಾಪುರ: ಬೈಂದೂರಿನಲ್ಲಿ ಕೋವಿಡ್‌ ಆಸ್ಪತ್ರೆ ಮಾಡಬೇಕೆಂದು ಗುರುವಾರ ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಬೈಂದೂರು ತಾ.ಪಂ. ಸಾಮಾನ್ಯ ಸಭೆಯಲ್ಲಿ ಬೇಡಿಕೆ ಸಲ್ಲಿಸಲಾಯಿತು.

Advertisement

ಅಧ್ಯಕ್ಷ ಮಹೇಂದ್ರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಕೊರೊನಾ ನಿರ್ವಹಣೆಯಲ್ಲಿ ಅತ್ಯುತ್ತಮ ಕಾಳಜಿ ತೋರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್‌, ಕೋವಿಡ್‌ ಆಸ್ಪತ್ರೆಯ ಡಾ| ನಾಗೇಶ್‌, 5 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಮುಂದಿನ ಸಭೆಯಲ್ಲಿ ಸಮ್ಮಾನ ಮಾಡುವುದು, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆಯವರ ಸೇವೆಗೆ ಅಭಿನಂದನೆ ಸಲ್ಲಿಸುವುದು ಎಂದು ನಿರ್ಣಯಿಸಲಾಯಿತು. ಪ್ರವೀಣ್‌ ಕುಮಾರ್‌ ಕಡ್ಕ ಅವರು ಈ ವಿಚಾರ ಪ್ರಸ್ತಾವಿಸಿದ್ದರು.

ಆಸ್ಪತ್ರೆ ಇಲ್ಲ
ಈಗಾಗಲೇ ಕುಂದಾಪುರದಲ್ಲಿ ಸರ್ವಸಜ್ಜಿತ ಕೋವಿಡ್‌ ಆಸ್ಪತ್ರೆ ಇರುವ ಕಾರಣ ಬೈಂದೂರಿಗೆ ಮಂಜೂರು ಕಷ್ಟ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ| ನಾಗಭೂಷಣ್‌ ಉಡುಪ ಹೇಳಿದರು. 1 ವಾರದಿಂದ ಶಂಕಿತ ಪ್ರಕರಣಗಳು ಕಡಿಮೆಯಾಗಿದ್ದು ತಡವಾಗಿ ಚಿಕಿತ್ಸೆಗೆ ಬರುತ್ತಿರುವುದರಿಂದ ಸಾವು ಗಳು ಸಂಭವಿಸುತ್ತಿವೆ. ಸೆ.30ರಂದು 1,100, ಸೆ.29ರಂದು 900, ಸೆ.28ರಂದು 800 ಮಾದರಿ ಸಂಗ್ರಹ ತಪಾಸಣೆಗಾಗಿ ನಡೆದಿದೆ. ಸಾರ್ವಜನಿಕರು ಮನೆಗೊಬ್ಬರಂತೆಯಾದರೂ ತಪಾಸಣೆ ನಡೆಸಿ ಕೊಳ್ಳಲೇಬೇಕು. ಈಗ ಕ್ವಾರಂಟೈನ್‌ ಇತ್ಯಾದಿ ನಿಯಮಗಳು ಸರಳವಾಗಿದ್ದು ಸೀಲ್‌ಡೌನ್‌ ಇಲ್ಲ ಎಂದರು.

ಅನುದಾನ
ಬೈಂದೂರು ಹೊಸ ತಾ.ಪಂ. ಆಗಿದ್ದು ಕಟ್ಟಡ ರಚನೆಯಾಗಬೇಕು. ಬದಲಿ ಕಟ್ಟಡವೂ ಸಮರ್ಪಕ ವಾಗಬೇಕು. ವೇತನೇತರ ವೆಚ್ಚಕ್ಕೆ ಅನುದಾನ ಬಿಡು ಗಡೆಯಾಗಬೇಕು. ಕುಂದಾಪುರ ತಾ.ಪಂ.ಗೆ ಬರುವ ಎಲ್ಲ ಅನುದಾನಗಳಲ್ಲಿ ಶೇ.50ರಷ್ಟು ಬೈಂದೂರಿಗೆ ನೀಡಬೇಕು ಎಂದು ನಿರ್ಣಯಿಸಲಾಯಿತು.

ಅಧಿಕಾರಿಗಳ ಗೈರು
ಪೊಲೀಸ್‌ ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿ.ಪಂ.ಗೆ ಬರೆಯಲು ನಿರ್ಧರಿಸಲಾಯಿತು. ಪ್ರವೀಣ್‌ ಕಡೆ ಅವರು, ಉಡುಪಿ ಜಿಲ್ಲೆಯ 10 ಪಿಡಿಒಗಳು, ಸಂಸದರು, ಶಾಸಕರ ಪಿಎಗಳಾಗಿ ಹೋಗಿದ್ದು ಅವರ ಪಂಚಾಯತ್‌ಗಳನ್ನು ಖಾಲಿ ಹುದ್ದೆಯಲ್ಲಿ ತೋರಿಸಿಲ್ಲ. ಇದರಿಂದ ಅಷ್ಟು ಪಂಚಾಯತ್‌ಗೆ
ಬೇರೆಯವರನ್ನು ಹಾಕಲು ಆಗದೇ ತೊಂದರೆ ಯಾಗಿದೆ ಎಂದರು.

Advertisement

ಅಂಗನವಾಡಿ
ಪಡುವರಿ ಗ್ರಾ.ಪಂ. ವ್ಯಾಪ್ತಿಯ ಸೋಮೇಶ್ವರ ಅಂಗನವಾಡಿ ಕಟ್ಟಡದ ಜಾಗ 94ಸಿಯಲ್ಲಿ ಹಕ್ಕುಪತ್ರ ಮಾಡಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ವೇತಾ ಸಂತೋಷ್‌, 26 ವರ್ಷಗಳಿಂದ ಅಂಗನವಾಡಿ ಅಲ್ಲಿದ್ದು 40 ಮಕ್ಕಳಿದ್ದಾರೆ. ಜಾಗದ ಕುರಿತು ಕಡತ ಇಲ್ಲ ಎಂದರು. ಸೇನೆಯಲ್ಲಿ ಸೇವೆ ಸಲ್ಲಿಸಿದ 37 ಜನರಿಗೆ ಆದ್ಯತೆ ಮೇರೆಗೆ ಜಾಗ ಮಂಜೂರು ಮಾಡಲು ನಿರ್ಣಯಿಸಲಾಯಿತು. ದಸ್ತಗೀರ್‌ ಮೌಲಾನಾ, 94ಸಿ ಹಕ್ಕುಪತ್ರ ಮಂಜೂರಿಗೆ ಬಾಕಿಯಿದ್ದು ಶೀಘ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್‌ ಬಸಪ್ಪ ಪೂಜಾರ್‌ ಒಪ್ಪಿದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ, ಪಿಂಚಣಿ ಅದಾಲತ್‌ ಮಾಡಬೇಕೆಂದರು.

ಆಧಾರ್‌ ಕಾರ್ಡ್‌ಗಾಗಿ ಇನ್ನೊಂದು ಕೌಂಟರ್‌ ಆರಂಭಿಸಲಾಗಿದೆ ಎಂದು ತಹಶೀಲ್ದಾರ್‌ ಹೇಳಿದರು. ಉಪ್ಪುಂದ ಗ್ರಾ.ಪಂ. ಎದುರಿನ ಕಸದ ರಾಶಿ ತೆಗೆಸಲು, ತ್ಯಾಜ್ಯ ವಿಲೇ ಘಟಕ ಸಮರ್ಪಕಗೊಳಿಸಲು ಪ್ರಮೀಳಾ ಒತ್ತಾಯಿಸಿದರು. ಅಕ್ರಮ ಗಣಿಗಾರಿಕೆಯಲ್ಲಿ ಜನಪ್ರತಿನಿಧಿಗಳು ಭಾಗಿಯಾದ ಆರೋಪ ಇದ್ದು ಸೂಕ್ತ ಮಾಹಿತಿ ನೀಡಬೇಕು ಎಂದು ಜಗದೀಶ್‌ ದೇವಾಡಿಗ ಒತ್ತಾಯಿಸಿದರು.
ಬೈಂದೂರು ಕಾರ್ಯನಿರ್ವಹಣಾಧಿಕಾರಿ ಭಾರತಿ, ಕುಂದಾಪುರ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್‌, ಉಪಾಧ್ಯಕ್ಷೆ ಮಾಲಿನಿ ಕೆ. ಉಪಸ್ಥಿತರಿದ್ದರು.

ಸಂಖ್ಯೆ ಗೊಂದಲ
ಸಭೆಯ ಆರಂಭದಲ್ಲಿ ಮಾಜಿ ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಸಭಾ ಸಂಖ್ಯೆ ಕುರಿತು ತಗಾದೆ ತೆಗೆದರು. ಫ‌ಲಕದಲ್ಲಿ 2ನೆ ಸಭೆ ಎಂದು ಹಾಕಲಾಗಿದ್ದು ಅಸಲಿಗೆ ಮೊದಲ ಸಭೆ ಅಲ್ಲವೇ ಎಂದು ಕೇಳಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಭೆಯೇ ನಿಯಮ ಪ್ರಕಾರ ಮೊದಲ ಸಭೆಯಾಗಿದ್ದು, ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯುವ ಮೊದಲ ಸಭೆ ಇದಾದರೂ ಸಂಖ್ಯೆಯ ಮಟ್ಟಿಗೆ 2ನೆಯದು ಎಂದು ಅಧ್ಯಕ್ಷರು ಸ್ಪಷ್ಟನೆ ನೀಡಿ, ನೋಟಿಸ್‌ನಲ್ಲಿ ತಪ್ಪಾಗಿದೆ ಎಂದರು. ಮುಂದಿನ ಸಭೆಯನ್ನು ಬೈಂದೂರಿನಲ್ಲೇ ನಡೆಸಬೇಕೆಂದು ಜಗದೀಶ್‌ ದೇವಾಡಿಗ ಆಗ್ರಹಿಸಿದರು.

ತನಿಖೆಗೆ ಆಗ್ರಹ
ಬೈಂದೂರು ಸಮುದಾಯ ಆಸ್ಪತ್ರೆ ಯಲ್ಲಿ ಶಸ್ತ್ರಚಿಕಿತ್ಸಕರೊಬ್ಬರು ಖಾಸಗಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿ ಕರ್ತವ್ಯದ ವೇಳೆ ಸರಕಾರಿ ಆಸ್ಪತ್ರೆಯಲ್ಲಿ ಇರುವುದಿಲ್ಲ. ಆದ್ದರಿಂದ 2 ತಿಂಗಳ ಸಿಸಿಫ‌ೂಟೇಜ್‌ನ್ನು ತಾ.ಪಂ.ಗೆ ನೀಡಬೇಕು. ಅವರನ್ನು ಜಿಲ್ಲೆ ಯಿಂದಲೇ ವರ್ಗ ಮಾಡಬೇಕು ಎಂದು ಜಗದೀಶ್‌ ದೇವಾಡಿಗ, ಅಧ್ಯಕ್ಷರು, ಪ್ರಮೀಳಾ ದೇವಾಡಿಗ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next