ಸುರಪುರ: ನಗರದ ಗೌತಮ ಬುದ್ಧ ವೃತ್ತದಿಂದ ಹೊಸಭಾವಿ ವರೆಗಿನ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆ ಕ್ರಾಂತಿಕಾರಿ ಬಣದ ಕಾರ್ಯಕರ್ತರು ನಗರಸಭೆ ಕಾರ್ಯಾಲಯ ಎದುರು ಪ್ರತಿಭಟಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಗೌತಮಬುದ್ಧ ವೃತ್ತದಿಂದ ಅಬೇಡ್ಕರ್ ನಗರದ ಹತ್ತಿರದ ಹೊಸಭಾವಿಗೆ ಹೋಗುವ ರಸ್ತೆಯನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ. ಇದರಿಂದ ರಸ್ತೆ ಇಕ್ಕಟ್ಟಾಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ ಎಂದು ಆರೋಪಿಸಿದರು.
ಈ ಮೊದಲು ರಸ್ತೆ ಸಾಕಷ್ಟು ವಿಶಾಲವಿತ್ತು. ಇತ್ತೀಚೆಗೆ ಕೆಲವರು ನಗರಸಭೆಯವರು ನಿರ್ಮಿಸಿದ್ದ ಚರಂಡಿಯನ್ನು ಕೆಡಿಸಿ ಮನೆ ಮತ್ತು ಕಟ್ಟೆಗಳನ್ನು ಕಟ್ಟಿಕೊಂಡಿದ್ದಾರೆ. ಆಟೋ, ಟಂಟಂ ಕಾರು ಬೈಕ್‌ಗಳು ಸಂಚರಿಸದಷ್ಟು ಇಕ್ಕಟ್ಟು ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಇದು ಫಕೀರ ಮಹೋಲಾ, ಅಂಬೇಡ್ಕರ್ ಬಡವಾಣೆ, ಕಬಾಡಗೇರಾ, ಕೊರವರ ಓಣಿ, ಜಾಲಗಾರ ಮಹೋಲ್ಲಾ, ಅಸರ್ ಮಹೋಲ್ಲಾಗಳಿಗೆ ಸಂಕರ್ಪ ಕಲ್ಪಿಸುತ್ತದೆ. ರಸ್ತೆ ಅತಿಕ್ರಮಣದಿಂದ ಎಲ್ಲ ಬಡವಾಣೆಯ ನಾಗರಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೆ ಅತಿಕ್ರಮಣ ತೆರವುಗೊಳಿಸಿ 20 ಅಡಿ ರಸ್ತೆ ಅಗಲೀಕರಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಆ. 16ರಂದು ನಗರಸಭೆ ಕಾರ್ಯಾಲಯಕ್ಕೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ ಮತ್ತು ಪೌರಾಯುಕ್ತರಿಗೆ ಸಲ್ಲಿಸಿದರು. ತಾಲೂಕು ಸಂಚಾಲಕ ರಾಮಣ್ಣ ಶೆಳ್ಳಗಿ, ಪ್ರಮುಖರಾದ ಮಾನಪ್ಪ ಬಿಜಾಸ್ಪೂರ, ಮೂರ್ತಿ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಕುರುಕುಂದಿ, ಹಣಮಂತ ಕುಂಬಾರಪೇಟ, ಜಟ್ಟೆಪ್ಪ ನಾಗರಾಳ, ಮರಿಲಿಂಗಪ್ಪ ನಾಟೆಕಾರ, ಶೇಖರ ಜೀವಣಗಿ, ಕಾಳಿಂಗಪ್ಪ, ಖಾಜಾಹುಸೇನ ಗುಡುಗುಂಟಿ, ಮಹೇಶ ಯಾದಗಿರಿ, ಸಂಗಪ್ಪ ಚಿಂಚೋಳಿ, ಬನ್ನಪ್ಪ ಕೋನಾಳ, ನಾಗರಾಜ ವಡಿಗೇರಿ ಇತರರಿದ್ದರು.