ಗುಳೇದಗುಡ್ಡ: ಪಟ್ಟಣದ ಹರದೊಳ್ಳಿಯಿಂದ ಗುಲಾಬ್ ಟಾಕೀಜ್‌ವರೆಗೆ ಹದಗೆಟ್ಟ ರಸ್ತೆ ದುರಸ್ತಿಗೆ ಒತ್ತಾಯಿಸಿ ಕರ್ನಾಟಕ ರೈತ ವಿಕಾಸ ಸಂಘ ಸಾರ್ವಜನಿಕರೊಂದಿಗೆ ಬೃಹತ್ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು.
ಪಟ್ಟಣದ ಹರದೊಳ್ಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಪಟ್ಟಣದ ಭಂಡಾರಿ ಕಾಲೇಜ್ ಸರ್ಕಲ್ ಬಳಿ ಬಂದು ರಸ್ತಾ ರೋಕೋ ನಡೆಸಿದರು. ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಬಸ್, ಟಂಟಂ, ಬೈಕ್ ಗಳ ಸಂಚಾರ ತಡೆದು ಪ್ರತಿಭಟನಾ ಕಾವು ಹೆಚ್ಚಿಸಿದರು. ಮಹಿಳೆ, ಪುರುಷರು ಒಳಗೊಂಡು ಅನೇಕ ರೈತರು ಹಾಗೂ ಸಾರ್ವಜನಿಕರು ಹಸಿರು ಶಾಲು ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಸಾರ್ವಜನಿಕರು ಪ್ರತಿಭಟನೆಗೆ ಸಾಥ್ ನೀಡಿ ಬೆಂಬಲಿಸಿದರು.
ಹದಗೆಟ್ಟ ರಸ್ತೆ ದುರಸ್ತಿಗೆ ನಿರ್ಲಕ್ಷ ತೋರುತ್ತಿರುವ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾ ನಿರತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವೈಫಲ್ಯ ಖಂಡಿಸಿದರು. ಈ ಭಾಗದ ಶಾಸಕರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು.
ಗುಲಾಬ್ ಟಾಕೀಜ್‌ದಿಂದ ಹರದೊಳ್ಳಿವರೆಗೆ ರಸ್ತೆ ಕಾಣದಷ್ಟು ತಗ್ಗು ಗುಂಡಿಗಳು ಬಿದ್ದಿವೆ. ಈಗಾಗಲೇ ಈ ತಗ್ಗು ಗುಂಡಿಗಳಲ್ಲಿ ಸಾಕಷ್ಟು ಬೈಕ್ ಸವಾರರು, ಪಾದಾಚಾರಿಗಳು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಇಲ್ಲಿನ ರಸ್ತೆ ದುರಸ್ತಿಗೆ ಆಗ್ರಹಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪ್ರತಿಭನಟಾಕಾರರು ಪಟ್ಟು ಹಿಡಿದರು. ಆದರೆ ಕೆಲವು ಹಿರಿಯರ ಮನವಿ ಮೇರೆಗೆ ರಸ್ತೆ ದುರಸ್ತಿಗೊಳಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ವಿಕಾಸ ಸಂಘದ ರಾಜ್ಯ ಉಪಾಧ್ಯಕ್ಷ ಶೇಖಪ್ಪ ಚವ್ಹಾಣ, ಜಿಲ್ಲಾಧ್ಯಕ್ಷ ಪರಶುರಾಮ ಮದಕಟ್ಟಿ, ತಾಲೂಕು ಅಧ್ಯಕ್ಷ ಕಿರಣ ಸಲಕಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜಹೀರಾಬಿ ನದಾಫ್, ರತ್ನವ್ವ ಗುಗ್ಗರಿ, ಸಚಿನ ಬಡಿಗೇರ, ಹುಚ್ಚೇಶ ಪೂಜಾರ, ಬಸವರಾಜ ಗೊಬ್ಬಿ, ಪ್ರವೀಣ ದೊತರದ, ಸಂಗು ಕುಂಬಾರ, ಸಾಗರ ತೋಳಮಟ್ಟಿ, ಕೃಷ್ಣಾ ಮ್ಯಾಗಿನಹಳ್ಳಿ, ಮಹಿಳಾ ಮುಖಂಡರು, ಕಾರ್ಯಕರ್ತರು ಇದ್ದರು.