Advertisement
ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಸಂತೋಷನಗರದ ಮುಖ್ಯ ರಸ್ತೆಯಿಂದ ಬುಗುರಿಕಡುವರೆಗೆ ಒಟ್ಟು 2.4 ಕಿ.ಮೀ. ದೂರವಿದ್ದು, ಈ ಪೈಕಿ ಅಂದಾಜು 900 ಮೀ.ವರೆಗೆ ಈವರೆಗೆ ಅಭಿವೃದ್ಧಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಈವರೆಗೆ ಅಭಿವೃದ್ಧಿಯಾಗದೆ ನನೆಗುದಿಗೆ ಬಿದ್ದಿದೆ.
Related Articles
Advertisement
ಈ ರಸ್ತೆಯುದ್ದಕ್ಕೂ ಮಳೆ ನೀರು ಹರಿದು ಹೋಗಲು ಎರಡೂ ಕಡೆಗಳಲ್ಲಿಯೂ ಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಾಗಿ ಮಳೆ ನೀರು ಪೂರ್ತಿ ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ರಸ್ತೆಯ ಹಲವೆಡೆಗಳಲ್ಲಿ ದೊಡ್ಡ – ದೊಡ್ಡ ಹೊಂಡ ಬಿದ್ದಿದ್ದು, ಮಳೆ ನೀರು ನಿಂತು ಗುಂಡಿಯು ಕಾಣದೆ ವಾಹನ ಸವಾರರು ಸಂಕಷ್ಟಪಡುವಂತಾಗಿದೆ.
80ಕ್ಕೂ ಹೆಚ್ಚು ಮನೆ :
ಈ ಕಾಸನಾಡಿ, ಬುಗುರಿಕಡು ಭಾಗದ ಜನರು ಪಂಚಾಯತ್, ಪಡಿತರ, ಅಂಚೆ, ಬ್ಯಾಂಕ್, ಪೇಟೆ ಇನ್ನಿತರ ಎಲ್ಲ ಕೆಲಸ ಕಾರ್ಯಗಳಿಗೆ ಹೆಮ್ಮಾಡಿ ಪೇಟೆಯನ್ನೇ ಆಶ್ರಯಿಸಿದ್ದಾರೆ. ಇಲ್ಲಿನ ನಾಗರಿಕರು ಹೆಮ್ಮಾಡಿ ಪೇಟೆಗೆ ಬರಬೇಕಾದರೆ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಈ ಭಾಗದಲ್ಲಿ 80ಕ್ಕೂ ಹೆಚ್ಚು ಮನೆಗಳಿದ್ದು, ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಓಡಾಟ ನಡೆಸುತ್ತವೆ.
ನಾವು ಸಂತೋಷನಗರದಲ್ಲಿ ಅನೇಕ ವರ್ಷಗಳಿಂದ ರಿಕ್ಷಾ ಬಾಡಿಗೆಗೆ ಮಾಡಿಕೊಂಡಿದ್ದು, ಕಾಸನಾಡಿ, ಬುಗುರಿಕಡು ಕಡೆಗೆ ನಮಗೆ ಹೆಚ್ಚಿನ ಬಾಡಿಗೆ ಇರುವುದು. ಆದರೆ ಈ ಹೊಂಡ-ಗುಂಡಿಮಯ ಮಾರ್ಗದಲ್ಲಿ ನಿತ್ಯ ಸಂಚರಿಸುತ್ತಿರುವುದರಿಂದ ನಮಗೆ ಸಿಗುವ ಬಾಡಿಗೆ ಪೂರ್ತಿ ನಮ್ಮ ರಿಕ್ಷಾ ದುರಸ್ತಿಗೆ ಆಗುತ್ತದೆ. ಇಂಧನ ದರವೂ ದುಬಾರಿ, ಹೀಗೆ ಆದರೆ ಜೀವನ ಹೇಗೆ? ನಾವು ಬಿಟ್ಟರೆ ಬೇರೆ ಕಡೆಗಳ ವಾಹನಗಳು ಇಲ್ಲಿಗೆ ಬಾಡಿಗೆಗೆ ಬರಲು ಸಹ ಹಿಂದೇಟು ಹಾಕುತ್ತಾರೆ. ಆದಷ್ಟು ಬೇಗ ಈ ರಸ್ತೆಯ ಅಭಿವೃದ್ಧಿಯಾಗಲಿ.– ಪ್ರಶಾಂತ್ ಪಡುಮನೆ, ರಿಕ್ಷಾ ಚಾಲಕರು
ಸಂತೊಷನಗರದಿಂದ ಬುಗುರಿಕಡು ರಸ್ತೆ ಅವ್ಯವಸ್ಥೆ ಬಗ್ಗೆ ಗಮನದಲ್ಲಿದ್ದು, ಈ ರಸ್ತೆಯ ಸುಮಾರು 1 ಕಿ.ಮೀ.ವರೆಗೆ ಈಗಾಗಲೇ ಅಭಿವೃದ್ಧಿ ಮಾಡಲಾಗಿದೆ. ಸಂಪೂರ್ಣ ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ 50 ಲಕ್ಷ ರೂ. ಅನುದಾನಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು