Advertisement

ಸರ್ವಿಸ್‌ ರಸ್ತೆಗಾಗಿ ರಿಕ್ಷಾ, ಬೈಕ್‌ ಸವಾರರ ಬೇಡಿಕೆ

10:40 PM Sep 18, 2019 | Sriram |

ಕೋಟ: ಕೇಂದ್ರ ಸರಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಯಾದ ಅನಂತರ ಸಂಚಾರ ನಿಯಮ (ವಿರುದ್ಧ ದಿಕ್ಕಿನಿಂದ ಪ್ರಯಾಣ) ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತಿದ್ದು, ಈ ಹಿಂದೆ ಚತುಷ್ಪಥ ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆಗಳಿಲ್ಲ ಎನ್ನುವ ಕಾರಣಕ್ಕೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದವರಿಗೆ ಸಾಕಷ್ಟು ಬಿಸಿ ಮುಟ್ಟಿದೆ. ಹೀಗಾಗಿ ಬಾಕಿ ಇರುವ ಸರ್ವಿಸ್‌ ರಸ್ತೆಗಳನ್ನು ಶೀಘ್ರ ನಿರ್ಮಿಸಬೇಕು ಎನ್ನುವ ಬೇಡಿಕೆ ಹೆಚ್ಚಿದೆ.

Advertisement

ಕೋಟದ ಹಲವು ಕಡೆ ಸಮಸ್ಯೆ
ಚತುಷ್ಪಥ ಕಾಮಗಾರಿಯ ಪ್ರಥಮ ಹಂತದ ಯೋಜನೆಯಲ್ಲೇ ಸಾಲಿಗ್ರಾಮದ ಕಾರ್ಕಡ-ಕಾವಡಿ ರಸ್ತೆಯಿಂದ ಮೀನುಮಾರುಕಟ್ಟೆ ತನಕ ಎರಡು ಕಡೆ ಸರ್ವಿಸ್‌ ರಸ್ತೆಗೆ ಅನುಮೋದನೆ ದೊರೆತಿತ್ತು. ಆದರೆ ಇದುವರೆಗೂ ಈ ಕಾಮಗಾರಿ ನಡೆದಿಲ್ಲ. ಇಲ್ಲಿನ ಕಾವಡಿ ರಸ್ತೆ ಮೂಲಕ ಆಗಮಿಸುವವರು ಸರಿಯಾದ ದಿಕ್ಕಿನಲ್ಲಿ ಸಾಲಿಗ್ರಾಮ ತಲುಪಬೇಕಾದರೆ ಸುಮಾರು 4 ಕಿ.ಮೀ ಸುತ್ತು ಬಳಸಿ ಗುಂಡ್ಮಿ ಮೂಲಕ ಸಂಚರಿಸಬೇಕು. ಆದರೆ ವಿರುದ್ಧ ದಿಕ್ಕಿನಲ್ಲಿ 500ಮೀ ದೂರದಲ್ಲೇ ಮುಖ್ಯಪೇಟೆ ತಲುಪಬಹುದು. ಹೀಗಾಗಿ ಇಲ್ಲಿ ವಿರುದ್ಧ ದಿಕ್ಕಿನ ಸಂಚಾರ ಹೆಚ್ಚಿದೆ ಮತ್ತು ಇದರಿಂದ ಸಾಕಷ್ಟು ಅಪಘಾತ, ಜೀವಹಾನಿ ಕೂಡ ಸಂಭವಿಸಿದೆ.

ಅದೇ ರೀತಿ ಸಾಸ್ತಾನಕ್ಕೆ 2ನೇ ಹಂತದಲ್ಲಿ ಸರ್ವಿಸ್‌ ರಸ್ತೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಇದುವರೆಗೆ ಅನು ಮೋದನೆ ದೊರೆತಿಲ್ಲ.

ಹೀಗಾಗಿ ಪಾಂಡೇಶ್ವರ ತಿರುವಿನ ಸಮೀಪ ತಾತ್ಕಾಲಿಕ ಡಿವೈಡರ್‌ ನೀಡಲಾಗಿದೆ. ಈ ಡಿವೈಡರ್‌ ಇಲ್ಲವಾದರೆ ಸ್ಥಳೀಯರು ಸುಮಾರು 4.ಕಿ.ಮೀ. ಸುತ್ತಿ ಬಳಸಿ ಮಾಬುಕಳ ಮೂಲಕ ಸಾಸ್ತಾನ ತಲುಪಬೇಕು. ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಸ್ತಾನಕ್ಕೆ ಕೇವಲ 500 ಮೀ.ದೂರವಿದೆ.

ಕೋಟದ ಗಿಳಿಯಾರು ರಸ್ತೆಯಲ್ಲೂ ಇದೇ ರೀತಿ ಸಮಸ್ಯೆ ಇದೆ. ಇಲ್ಲಿನವರು ಕೋಟ ಮೂಕೈ ಮೂಲಕ 3 ಕಿ.ಮೀ. ಸುತ್ತಿ ಕೋಟ ತಲುಪಬೇಕು. ಆದರೆ ವಿರುದ್ಧ ದಿಕ್ಕಿನಲ್ಲಿ ಕೋಟಕ್ಕಿರುವ ದೂರ ಕೇವಲ 1 ಕಿ.ಮೀ. ಇಲ್ಲಿಯೂ ಸರ್ವಿಸ್‌ ರಸ್ತೆ ಬೇಕೆನ್ನುವ ಬೇಡಿಕೆ ಇದೆ.

Advertisement

ಮಂಜೂರಾದ ಕಾಮಗಾರಿ ಶೀಘ್ರ ಕೈಗೊಳ್ಳಿ
ಸಾಲಿಗ್ರಾಮದಲ್ಲಿ ಪ್ರಥಮ ಹಂತದಲ್ಲೇ ಸರ್ವಿಸ್‌ ರಸ್ತೆ ಮಂಜೂರಾಗಿದೆ. ಚತುಷ್ಪಥ ಕಾಮಗಾರಿಗೆ 2010 ಸೆ. 5ರಂದು ಕಾಮಗಾರಿ ಒಪ್ಪಂದ ನಡೆದಿದ್ದು, ಒಡಂಬಡಿಕೆ ಯಂತೆ 910 ದಿನದೊಳಗೆ ಅಂದರೆ 2013ರ ಮಾ.5ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇದೀಗ ಹೆಚ್ಚುವರಿ 6ವರ್ಷ ಪೂರ್ಣಗೊಂಡರು ಕಾಮಗಾರಿ ಮುಗಿದಿಲ್ಲ. ಆದ್ದರಿಂದ ಬಾಕಿ ಇರುವ ಕಾಮಗಾರಿಯನ್ನು ಶೀಘ್ರ ನಡೆಸಬೇಕು ಎನ್ನುವ ಬೇಡಿಕೆ ಬಲವಾಗಿದೆ.

ಬಾಡಿಗೆಗೆ ತಕರಾರು
ವಿರುದ್ಧ ದಿಕ್ಕಿನಲ್ಲಿ 200-300 ಮೀಟರ್‌ ದೂರದಲ್ಲಿ ತಲುಪಬಹುದಾದ ಸ್ಥಳಕ್ಕೆ 3-4 ಕಿ.ಮೀ. ಸುತ್ತಿ ಬಳಸಿ ಪ್ರಯಾಣಿಸಿದರೆ ಪ್ರಯಾಣಿಕರು ಹೆಚ್ಚುವರಿ ಬಾಡಿಗೆ ನೀಡಲು ಒಪ್ಪುವುದಿಲ್ಲ. ಹೀಗಾಗಿ ಕಡಿಮೆ ದೂರವಿದ್ದಾಗ ತಪ್ಪು ಎನ್ನುವುದು ತಿಳಿದಿದ್ದರೂ ವಿರುದ್ಧ ದಿಕ್ಕಿನ ಸಂಚಾರ ಅನಿವಾರ್ಯವಾಗಿದೆ. ಸಾಲಿಗ್ರಾಮದಲ್ಲಿ ಮಂಜೂರಾದ ಸರ್ವಿಸ್‌ ರಸ್ತೆ ಆದಷ್ಟು ಶೀಘ್ರ ನಿರ್ಮಿಸಿದರೆ ಗೊಂದಲ ಸ್ವಲ್ಪಮಟ್ಟಿಗೆ ದೂರವಾಗಲಿದೆ ಮತ್ತು ಎಲ್ಲ ಕಡೆ ಮುಖ್ಯ ಪೇಟೆಯ ಅಕ್ಕ-ಪಕ್ಕ ಸರ್ವಿಸ್‌ ರಸ್ತೆ ನಿರ್ಮಿಸಬೇಕು.
– ಸುಭಾಷ್‌ ಕಾರ್ಕಡ, ಸಾಲಿಗ್ರಾ,ಮ,
ಆಟೋ ಚಾಲಕರು

ರಿಯಾಯಿತಿ ಅಸಾಧ್ಯ
ಸರ್ವಿಸ್‌ ರಸ್ತೆ ಇಲ್ಲ ಎನ್ನುವ ಕಾರಣಕ್ಕೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರಿಗೆ ರಿಯಾಯಿತಿ ನೀಡಲು ಅಸಾಧ್ಯ. ಅಪಘಾತವಾದಾಗ 50-100 ಮೀಟರ್‌ ದೂರ ಸಂಚರಿಸುತ್ತಿದ್ದರೂ ಅದು ಅಪರಾಧ-ಅಪರಾಧವೇ. ಸರ್ವಿಸ್‌ ರಸ್ತೆ ಸಮಸ್ಯೆ ಬಗ್ಗೆ ನಮಗೂ ತಿಳಿದಿದ್ದು ಮೂರ್‍ನಾಲ್ಕು ತಿಂಗಳ ಹಿಂದೆ ಪೊಲೀಸ್‌ ಇಲಾಖೆ, ಆರ್‌.ಟಿ.ಒ., ಪಿ.ಡಬ್ಲೂ.ಡಿ., ಎನ್‌.ಎಚ್‌.ಐ. ಜತೆಯಾಗಿ ಹೆಜಮಾಡಿಯಿಂದ ಬೈಂದೂರು ತನಕ ಎಲ್ಲಿ ಅಪಘಾತ ವಲಯಗಳಿದೆ. ಎಲ್ಲಿ “ಯು’ ಟರ್ನ್ಗಳು ಬೇಕು. ಸರ್ವಿಸ್‌ ರಸ್ತೆಗಳು ಬೇಕು ಎನ್ನುವ ಕುರಿತು ವರದಿ ನೀಡಿತ್ತು. ಸರಕಾರದ ಮಟ್ಟದಲ್ಲಿ ಅದು ಕಾರ್ಯಗತವಾಗಬೇಕಿದೆ.
– ನಿತ್ಯಾನಂದ ಗೌಡ, ಪೊಲೀಸ್‌ ಉಪ ನಿರೀಕ್ಷಕರು ಕೋಟ ಪೊಲೀಸ್‌ ಠಾಣೆ

ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ
ಯೋಜನೆಯ ಪ್ರಕಾರ ಜಿಲ್ಲೆಯಲ್ಲಿ ಕೇವಲ ಸಾಲಿಗ್ರಾಮದಲ್ಲಿ ಮಾತ್ರ ಸರ್ವಿಸ್‌ ರಸ್ತೆ ಬಾಕಿ ಇದೆ. ಮಳೆಗಾಲ ಮುಗಿಯುತ್ತಿದ್ದಂತೆ ಈ ಕಾಮಗಾರಿ ಆರಂಭಿಸಲಿದ್ದೇವೆ. ದ್ವಿತೀಯ ಹಂತದಲ್ಲಿ ಸಲ್ಲಿಕೆಯಾದ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿ ಮಂಜೂರಾಗಬೇಕಿದೆ.
– ರಾಘವೇಂದ್ರ,
ನವಯುಗ ಮುಖ್ಯ ಅಭಿಯಂತರ

-ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next