ಗದಗ: ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಕನ್ನಡ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಖಾಸಗಿ ಆಡಳಿತ ಮಂಡಳಿ ಮತ್ತು ನೌಕರರಸಮನ್ವಯ ಹೋರಾಟ ಸಮಿತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಕಳೆದ 20 ವರ್ಷಗಳಿಂದ ಕನ್ನಡ ಭಾಷೆಯ ಅಳಿವು-ಉಳಿವಿಗಾಗಿ ಸಾವಿರಾರು ಕನ್ನಡ ಶಾಲೆಗಳ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸರಕಾರದ ಅನುದಾನ ಸಿಗದೇ ಸಾವಿರಾರು ಶಿಕ್ಷಕರ ಬದುಕು ಶೋಚನೀಯವಾಗಿದೆ.
2006-07ನೇ ಸಾಲಿನಲ್ಲಿ ಉಪಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1987ರಿಂದ 1994-95ರ ವರೆಗೆ ಆರಂಭವಾದ 2,448 ಖಾಸಗಿ ಶಾಲಾ ಕಾಲೇಜುಗಳಗೆ ಅನುದಾನ ನೀಡುವಮೂಲಕ 23 ಸಾವಿರಕ್ಕೂ ಹೆಚ್ಚು ಶಿಕ್ಷಕ ಕುಟುಂಬಗಳಿಗೆ ಬದುಕಿನ ಭರವಸೆ ನೀಡಿದ್ದರೂ ಈವರೆಗೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಪಿಎಸ್ ರದ್ದತಿಮಾಡುವುದು, ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಜಾರಿಗೊಳಿಸಬೇಕು.
ಶಿಕ್ಷಕ ಮತ್ತು ಮಕ್ಕಳ ಅನುಪಾತ 1:50 ಅನುಷ್ಠಾನಕ್ಕೆ ತರಬೇಕು. ಜ್ಯೋತಿ ಸಂಜೀವಿನಿ ಅನುದಾನಿತ ಶಾಲಾ ಸಿಬ್ಬಂದಿ, ಖಾಲಿ ಹುದ್ದೆಗಳ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಗೌರವಾಧ್ಯಕ್ಷ ಡಾ| ಬಸವರಾಜ ಧಾರವಾಡ, ಅಧ್ಯಕ್ಷ ಧೀರೇಂದ್ರ ಹುಯಿಲಗೋಳ, ಗೌರವಾಧ್ಯಕ್ಷ ಡಾ| ಬಸವರಾಜ ಧಾರವಾಡ, ಎಸ್. ಎಂ. ಕೊಟಗಿ, ಸಮಾಜ ಸೇವಕ ನಾಗರಾಜ ಕುಲಕರ್ಣಿ, ಎಂ.ಕೆ. ಲಮಾಣಿ, ಎಚ್.ಸಿ. ಚಕ್ಕಡಿಮಠ, ಝಡ್.ಎಂ. ಖಾಜಿ, ಎಸ್.ವೈ. ನಾಯಕ,ಎಸ್.ಎಲ್. ಹುಯಿಲಗೋಳ, ಕೊಟ್ರೇಶ ಮೆಣಸಿನಕಾಯಿ,ಎಲ್.ಎಸ್. ಅರಳಿಹಳ್ಳಿ, ಎ.ಎಸ್. ಪಾಟೀಲ, ಎಲ್.ಎಂ. ಕೊಷ್ಟಿ, ಸಂಚಾಲಕರಾದ ಎಸ್.ಎಸ್. ಸರ್ವಿ, ಗಂಗಾಧರ ಕೆ.ಸಿ. ಮತ್ತಿತರರು ಇದ್ದರು.