ಸುರಪುರ: ತಾಲೂಕಿನ ಅಮಲಿಹಾಳ ಗ್ರಾಮದಲ್ಲಿ ಮೇ 28ರಂದು ನಡೆಯುವ ಆಂಜನೇಯ ಜಾತ್ರಾ ಉತ್ಸವದಲ್ಲಿ ಹೂವಿನಳ್ಳಿಯ ದಲಿತರಿಗೆ ದೇಗುಲ ಪ್ರವೇಶಿಸದಂತೆ ನಿರ್ಬಂಧ ಹಾಕಿರುವ ಅಮಲಿ ಹಾಳ ಗ್ರಾಮದ ಮೇಲ್ವರ್ಗದವರ ವಿರುದ್ಧ ಶಿಸ್ತು ಕ್ರಮಕಗೊಳ್ಳಬೇಕು ಮತ್ತು ದೇವಸ್ಥಾನ ಪ್ರವೇಶಿಸುವ ದಲಿತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ದಲಿತ ಸಂಘಟನೆ ಕ್ರಾಂತಿಕಾರಿ ಬಣದ ಕಾರ್ಯಕರ್ತರು ಬುಧವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಗ್ರಾಮದಲ್ಲಿ ಪ್ರತಿವರ್ಷದಂತೆ ಆಂಜನೇಯ ಜಾತ್ರೆ ನಡೆಯುತ್ತದೆ. ಉತ್ಸವದಲ್ಲಿ ಹೂವಿನಳ್ಳಿಯ ಕೆಲ ದಲಿತ ಕುಟುಂಬಗಳು ಮೊದಲಿನಿಂದಲೂ ಕೆಲ ಸಂಪ್ರದಾಯಗಳನ್ನು ನಿರ್ವಹಿಸುತ್ತಾರೆ. ಆದರೆ ಈ ಬಾರಿಯ ಉತ್ಸವದಲ್ಲಿ ದಲಿತರು ಭಾಗವಹಿಸದಂತೆ ಅಮಲಿಹಾಳ ಗ್ರಾಮದ ಮೇಲವರ್ಗದವರು ದಲಿತರ ದೇಗುಲ ಪ್ರವೇಶಕ್ಕೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಅಮಲಿಹಾಳ ಗ್ರಾಮದ ಮುಖಂಡರೊಬ್ಬರು ಹೂವಿನಳ್ಳಿ ಗ್ರಾಮದ ದಲಿತ ಯಮನಪ್ಪ ಕುರಿ, ಭೀಮಪ್ಪ ಬಡಿಗೇರ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ನಮ್ಮ ಗ್ರಾಮದ ಜಾತ್ರೆಯಲ್ಲಿ ನೀವು ಭಾಗವಹಿಸಬಾರದು. ಗುಡಿ ಮುಟ್ಟುವುದು, ಬಾವಿ ಮೇಲಿರುವುದು, ಕಟ್ಟೆ ಕಟ್ಟುವುದು ಮಾಡಕೂಡದು. ಇಲ್ಲವಾದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡುವ ಮೂಲಕ ದಲಿತರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಎಚ್ಚರಿಕೆ ಕೊಟ್ಟಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ದಲಿತರಿಗೆ ದೇವಸ್ಥಾನ ಪ್ರವೇಶ ಮಾಡಲು ಅನುಕೂಲ ಮಾಡಿಕೊಡಬೇಕು. ಜಿಲ್ಲಾ ಮತ್ತು ತಾಲೂಕಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಸಮಸ್ಯೆಯಾಗದಂತೆ ಜಾಗೃತೆ ವಹಿಸಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮನವಿ ಸ್ವೀಕರಿಸಿದರು. ಮುಖಂಡರಾದ ಮಾನಪ್ಪ ಬಿಜಾಸಪುರ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಳ್ಳಿ, ಧರ್ಮರಾಜ ಬಡಿಗೇರ, ಜೆಟ್ಟೆಪ್ಪ ನಾಗರಾಳ, ಮಲ್ಲು ಬಿಲ್ಲವ್, ರಮೇಶ ಅರಿಕೇರಿ, ಖಾಜಾ ಹುಸೇನ್ ಗುಡುಗುಂಟಿ, ಮಲ್ಲಪ್ಪ ಮುಷ್ಠಳ್ಳಿ, ಹುಲಗಪ್ಪ ಜಾಂಗೀರ, ಹನುಮಂತ ನರಸಿಂಗ ಪೇಟೆ, ಮಹೇಶ ಯಾದಗಿರಿ ಹೂವಿನಹಳ್ಳಿ ಗ್ರಾಮದ ದಲಿತರಿದ್ದರು.