Advertisement

ಬಾಕಿ ವೇತನ ಪಾವತಿಗೆ ಆಗ್ರಹ

06:32 AM May 31, 2019 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಸರ್ಕಾರದ ಅಪರ ಕಾರ್ಯದರ್ಶಿ ಸ್ವಾಮಿ ಅವರ ವರದಿಯ ಶಿಫಾರಸಿನಂತೆ ಗ್ರಾಪಂಗಳಲ್ಲಿ ಅನುಮೋದನೆಗೊಳ್ಳದೇ ದುಡಿಯುತ್ತಿರುವ ಎಲ್ಲಾ ನೌಕರರನ್ನು ಏಕಕಾಲದಲ್ಲಿ ಜಿಪಂಗಳ ಮೂಲಕ ಅನುಮೋದನೆ ನೀಡಿ ಕಾಯಂಗೊಂಡಿರುವ ನೌಕರರಿಗೆ ಬಾಕಿ ವೇತನ ಕೂಡಲೇ ನೀಡುವಂತೆ ಆಗ್ರಹಿಸಿ ಗುರುವಾರ ಜಿಲ್ಲಾಡಳಿತ ಭವನದ ಎದುರು ನೂರಾರು ಗ್ರಾಪಂ ನೌಕರರು ರಾಜ್ಯ ಗ್ರಾಪಂ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

Advertisement

ನಗರದ ಸಾರ್ವಜನಿಕ ಬಸ್‌ ನಿಲ್ದಾಣದಿಂದ ನಗರದ ಹೊರ ವಲಯದ ಅಣಕನೂರು ಸಮೀಪದ ಜಿಲ್ಲಾಡಳಿತ ಭವನದ ಎದುರು ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದ ಗ್ರಾಪಂ ನೌಕರರು, ವರ್ಷದಿಂದ ವೇತನ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ ಗ್ರಾಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಮೀನಾಮೇಷ: ಗ್ರಾಪಂ ನೌಕರರ ಸಂಘದ ಹೋರಾಟದ ಫ‌ಲವಾಗಿ ಸರ್ಕಾರದಿಂದ ನೌಕರರು ವೇತನ ಪಡೆಯಲು ಸಾಧ್ಯವಾಗಿದೆ. ಆದರೆ ಜಿಲ್ಲೆಯಲ್ಲಿ ಗ್ರಾಪಂಗಳಲ್ಲಿ ದುಡಿಯುತ್ತಿರುವ ನೌಕರರನ್ನು ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ಮೇಲ್ಪಟ್ಟ ನೌಕರರನ್ನು ಇಎಫ್ಎಂಎಸ್‌ ಸೇರಿಸಲು ಗ್ರಾಪಂ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಎಫ್ಎಂಎಸ್‌ಗೆ ಸೇರಿಸಲು ಸಾಧ್ಯವಾಗದ ನೌಕರರಿಗೆ ವೇತನ ಕೂಡ ಪಾವತಿಯಾಗುತ್ತಿಲ್ಲ. ಗ್ರಾಪಂಗಳಲ್ಲಿ ತೆರಿಗೆ ವಸೂಲಿ ಮಾಡಿ ವೇತನ ಪಾವತಿ ಮಾಡುವಂತೆ ಸರ್ಕಾರ ಆದೇಶಿಸಿದರೂ ಕೂಡ ಗ್ರಾಪಂಗಳು ನಿರ್ಲಕ್ಷ್ಯ ಧೋರಣೆ ವಹಿಸುತ್ತಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕಡೆಗಣನೆ: ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಗ್ರಾಪಂಗಳು ಸ್ವತಂತ್ರವಾಗಿ ಸ್ವಯಂ ಆಡಳಿತ ನಡೆಸಬೇಕೆಂದು ಆದೇಶವಿದ್ದರೂ ಗ್ರಾಪಂ ಆಡಳಿತ, ಗ್ರಾಪಂ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದರು.

Advertisement

ರಾಜ್ಯದಲ್ಲಿ 34 ಸಾವಿರ ಪಂಪ್‌ ಆಪರೇಟರ್‌ಗಳು, ವಾಟರ್‌ವೆುನ್‌ಗಳು ಸುಮಾರು 75 ಸಾವಿರ ಕುಡಿಯುವ ನೀರು ಸರಬರಾಜು ಶಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವೇತನ, ಕಾಯಮಾತಿ, ಬಡ್ತಿ ಅನುಮೋದನೆ ಕಡೆಗಣಿಸಲಾಗಿದೆ ಎಂದರು.

ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕಸ ಗುಡಿಸುವ ನೌಕರರು ಇದ್ದಾರೆ. 5 ಸಾವಿರಕ್ಕೂ ಒಬ್ಬರು ಕಸ ಗೂಡಿಸುವುದು ಅವೈಜ್ಞಾನಿಕವಾಗಿದೆ. ಪಟ್ಟಣ ಪಂಚಾಯಿತಿಗಳಲ್ಲಿ ಇರುವಂತೆ ಐಡಿಪಿ ಸಾಲಪ್ಪ ವರದಿಯಂತೆ 700ಕ್ಕೂ ಒಬ್ಬರನ್ನು ಕಸ ಗುಡಿಸುವವರನ್ನು ನೇಮಕ ಮಾಡಬೇಕೆಂದರು.

ಗ್ರಾಪಂಗಳಲ್ಲಿ ಒಬ್ಬರು ಕರ ವಸೂಲಿಗಾರರು, ಇಬ್ಬರು ಕ್ಲರ್ಕ್‌, ಡಾಟಾ ಎಂಟ್ರಿ ಆಪರೇಟರ್‌ಗಳ ಅನುಮೋದನೆ ಕಷ್ಟಕರವಾಗಿದೆ. ಆದ್ದರಿಂದ ಸ್ವಾಮಿ ವರದಿ ಶಿಫಾರಸಿನಂತೆ ಜಿಪಂಗಳ ಮೂಲಕ ಏಕಕಾಲದಲ್ಲಿ ಎಲ್ಲಾ ನೌಕರರಿಗೆ ಅನುಮೋದನೆ ನೀಡಿ ಅವರಿಗೆ ಸರ್ಕಾರದಿಂದಲೇ ವೇತನ ಪಾವತಿ ಮಾಡಬೇಕೆಂದು ಮಾರುತಿ ಮಾನ್ಪಡೆ ಆಗ್ರಹಿಸಿದರು.

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಗ್ರಾಪಂ ನೌಕರರು ದಶಕಗಳಿಂದ ಕಾಯಂಗೊಳಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಹೋರಾಟ ನಡೆಸಿದ ಪರಿಣಾಮ ಸರ್ಕಾರ ಕಳೆದ ವರ್ಷ ಕಾಯಂಗೊಳಿಸಿದೆ. ಆದರೆ ಸಮರ್ಪಕವಾಗಿ ಕಾಲಕಾಲಕ್ಕೆ ವೇತನ ಕೊಡದೇ ವಿಳಂಬ ತೋರುತ್ತಿರುವುದು ಸರಿಯಲ್ಲ.

ಕಾಯಂಗೊಳಿಸುವ ನಿಟ್ಟಿನಲ್ಲಿ ಜಿಪಂನಿಂದ ಅನುಮೋದನೆಗೊಳ್ಳುವ ನೌಕರರು ಬಹಳಷ್ಟು ಮಂದಿ ಇದ್ದು, ಸರ್ಕಾರ ಈ ಬಗ್ಗೆ ಕ್ರಮ ವಹಿಸಿ ಬಾಕಿ ಇರುವ ನೌಕರರಿಗೆ ಜಿಪಂನಿಂದ ಅನುಮೋದನೆ ಕೊಡಲು ಸೂಚಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳಾದ ಬಿ.ಆಂಜನೇಯರೆಡ್ಡಿ, ಪಾಪಣ್ಣ, ವೆಂಕಟರಾಮಯ್ಯ, ಮುನಿತಿಮ್ಮಯ್ಯ, ಶ್ರೀನಿವಾಸ್‌, ವೆಂಕಟೇಶಪ್ಪ, ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಗ್ರಾಪಂ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಗ್ರಾಪಂ ನೌಕರರ ಹಕ್ಕೋತ್ತಾಯಗಳೇನು?: ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಗ್ರಾಪಂ ನೌಕರರು, ಒಂದು ವರ್ಷದಿಂದ ಬಾಕಿ ಇರುವ ವೇತನ ಕೊಡಬೇಕು, ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ಉಪಧನ ನೀಡಬೇಕು, ಎಲ್ಲಾ ನೌಕರರಿಗೆ ಸೇವಾ ಪುಸ್ತಕ ತೆರೆಯಬೇಕು, ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರೂಪಿಸಬೇಕು,

ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚ ನೀಡಬೇಕು, ಗ್ರಾಪಂ ನೌಕರರಿಗೆ ಕರ ವಸೂಲಿಗೆ ಹುದ್ದೆಗೆ ಬಡ್ತಿ ನೀಡಬೇಕು, ಕರ ವಸೂಲಿಗಾರ ಹುದ್ದೆಯಿಂದ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕೆಂದು ಕೋರಿ ಜಿಲ್ಲಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next