ರಾಮನಗರ: ತಾಲೂಕಿನ ಹುಣಸನಹಳ್ಳಿ ಬಳಿ ಕೋಳಿ ತ್ಯಾಜ್ಯದಿಂದ ಎಣ್ಣೆ ತೆಗೆಯುವ ಘಟಕದಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಅಲ್ಲದೆ, ಈ ಘಟದಿಂದ ಹೊರಬರುತ್ತಿರುವ ಕೆಟ್ಟ ವಾಸನೆ ಸಹಿಸಿಕೊಳ್ಳಲಾಗು ತ್ತಿಲ್ಲ. ಹೀಗಾಗಿ ಈ ಘಟಕವನ್ನು ತೆರವುಗೊಳಿಸ ಬೇಕು ಎಂದು ಆಗ್ರಹಿಸಿ, ಸ್ಥಳೀಯರು ಹುಣಸನಹಳ್ಳಿ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದಾರೆ.
ನಾಗರೀಕರ ಪರವಾಗಿ ಆರ್.ಎ.ಲೂರ್ದುನಾ ಥನ್ ಮತ್ತು ಇತರರು ಪಂಚಾಯ್ತಿ ಅಧ್ಯಕ್ಷೆ ಸುನಿತಾ ಬಾಯಿ ಅವರಿಗೆ ಮನವಿ ನೀಡಿದ್ದು, ಪಂಚಾಯ್ತಿ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದ ಶಿಡ್ಲಕಲ್ಲು ಸರ್ವೆ ಸಂಖ್ಯೆ 129/1ರಲ್ಲಿ ಈ ಘಟಕ ಇದೆ. ಕಾರ್ಖಾನೆ ಇರುವ ಸುತ್ತಮುತ್ತಲು ಹಸಿರಿ ನಿಂದ ಕೂಡಿದೆ. ಇಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಮಾವಿನ ಮರಗಳಿವೆ. ಕೃಷಿ ಭೂಮಿ ಇದೆ. ಈ ಕಾರ್ಖಾನೆಯಲ್ಲಿ ಕೋಳಿ ತ್ಯಾಜ್ಯದಿಂದ ಆಯಿಲ್ ತೆಗೆಯಲಾಗುತ್ತಿದೆ. ಕಾರ್ಖಾನೆಯಿಂದ ದುರ್ವಾಸನೆ ಸುತ್ತಮುತ್ತಲು ಹರಡುತ್ತಿದೆ. ಪರಿಸರ ಮಾಲಿನ್ಯವಾಗುತ್ತಿದೆ. ದುರ್ವಾಸನೆ ಸಹಿಸಲಾಗುತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಲಾಗಿದೆ.
ಪ್ರಾಣಿ, ಪಕ್ಷಿಗಳಿಗೂ ಸಮಸ್ಯೆ: ಶಿಡ್ಲಕಲ್ಲು ಬೆಟ್ಟ, ಅರಣ್ಯ ಪ್ರದೇಶ ಇದ್ದು, ರಾಷ್ಟ್ರೀಯ ಪಕ್ಷಿ ನವಿಲುಗಳ ಸಂಖ್ಯೆಯ ಗಣನೀಯ ಸಂಖ್ಯೆಯಲ್ಲಿದೆ. ವಿವಿಧ ಪ್ರಬೇಧದ ಪಕ್ಷಿಗಳಿವೆ. ಕಾರ್ಖಾನೆಯಿಂದ ಹೊರಬರುತ್ತಿರುವ ದುರ್ವಾಸನೆಯಿಂದಾಗಿ ಪರಿಸರಕ್ಕೆ ಮಾರಕವಾಗುತ್ತಿದ್ದು, ಪ್ರಾಣಿ, ಪಕ್ಷಿಗಳಿಗೂ ಸಮಸ್ಯೆಯಾಗುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಪರಿಶೀಲಿಸಿ: ಇದೇ ರೀತಿಯ ಮನವಿ ಯನ್ನು ತಹಶೀಲ್ದಾರ್ ಅವರಿಗೂ ಕೊಟ್ಟಿರುವುದಾಗಿ ತಿಳಿಸಿರುವ ಆರ್.ಎ.ಲೂರ್ದುನಾಥನ್, ಪಂಚಾಯ್ತಿ ಅಧ್ಯಕ್ಷರು, ಪಿಡಿಒ, ತಹಶೀಲ್ದಾರರು, ಪರಿಸರ ಇಲಾಖೆಯ ಅಧಿಕಾರಿಗಳು ತಕ್ಷಣ ಈ ಕಾರ್ಖಾನೆಯ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸ ಬೇಕು. ಅಲ್ಲದೆ, ಪ್ರಾಣಿಗಳಿಗೆ ಫೀಡ್ಸ್ ತಯಾರಿಕೆಗೆ ಎಂದು ಪರವಾನಿಗೆ ಪಡೆದು, ಕೋಳಿ ತ್ಯಾಜ್ಯದಿಂದ ಆಯಿಲ್ ತೆಗೆಯುವ ಘಟಕ ಆರಂಭಿಸಿದ್ದಾರೆ ಎಂಬ ಆರೋಪಗಳು ಇವೆ. ಹೀಗಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಪರಿಸರಕ್ಕೆ ಹಾನಿಯಾಗುತ್ತಿರುವ ಈ ಘಟಕವನ್ನು ತಕ್ಷಣ ನಿಲ್ಲಿಸ ಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಹುಣಸನಹಳ್ಳಿ ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸುವ ವೇಳೆ ಆರ್.ಎ.ಲೂರ್ದುನಾಥನ್, ಮುತ್ತು ಸ್ವಾಮಿ, ಸತೀಶ್, ನಾಗರಾಜು, ನಾಯಾಯಣ್ ಸೇರಿದಂತೆ ಸ್ಥಳೀಯರು ಹಾಜರಿದ್ದರು.
ಕೈಗಾರಿಕಾ ಘಟಕದಿಂದ ಕೆಟ್ಟ ವಾಸನೆ ಬರುತ್ತಿದೆ. ಸಾರ್ವಜನಿಕರು, ಪ್ರಾಣಿ, ಪಕ್ಷಿ, ಪರಿಸರಕ್ಕೆ ಸಮಸ್ಯೆಯಾಗು ತ್ತಿದೆ ಎಂದು ಸ್ಥಳೀಯರು ದೂರಿದ್ದು, ಈ ವಿಚಾರವನ್ನು ಪಂಚಾಯ್ತಿಯ ಸಭೆಯಲ್ಲಿ ಪ್ರಸ್ಥಾಪಿಸಲಾಗುವುದು. ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ● ಸುನೀತಾ ಬಾಯಿ, ಅಧ್ಯಕ್ಷೆ, ಹುಣಸನಹಳ್ಳಿ ಗ್ರಾಪಂ