Advertisement

ಸ್ಟಾರ್ ಸಿನ್ಮಾ ಜೊತೆ ಹೊಸಬರ ಚಿತ್ರಗಳಿಗೂ ಬೇಡಿಕೆ

09:59 AM Apr 22, 2020 | Suhan S |

ಈ ಲಾಕ್‌ಡೌನ್‌ ಈಗ ಎಲ್ಲದರ ಮಹತ್ವ ತಿಳಿಸಿದೆ. ಸಿನಿಮಾ ವಿಚಾರಕ್ಕೆ ಬಂದರೆ, ಹೊಸಬರಿಗೆ ಈಗ ಶುಭಯೋಗ ಎನ್ನಬಹುದು. ಹೌದು. ಅದೊಂದು ಕಾಲವಿತ್ತು. ಸ್ಟಾರ್ ಸಿನಿಮಾಗಳಿಗೆ ಮಾತ್ರ ಟಿವಿ ರೈಟ್ಸ್‌ ಸಿಗುತ್ತಿತ್ತು. ಹೊಸಬರ ಸಿನಿಮಾಗಳಿಗಂತೂ ಟಿವಿ ರೈಟ್ಸ್‌ ಅನ್ನೋದು ಗಗನ ಕುಸುಮ.

Advertisement

ಕಾಲ ಕ್ರಮೇಣ ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತಹ ಹೊಸಬರ ಚಿತ್ರಗಳು ತೆರೆಗೆ ಅಪ್ಪಳಿಸಿದವು. ಬಹುತೇಕ ಸಿನಿ ಪ್ರಿಯರು ಹೊಸಬರ ಸಿನಿಮಾಗಳಲ್ಲಿರುವ ಕಂಟೆಂಟ್‌ ಮೆಚ್ಚಿಕೊಂಡು ಹೊಸಬರ ಚಿತ್ರಗಳನ್ನು ಬೆಂಬಲಿಸಿದರು. ಚಿತ್ರಮಂದಿರಗಳಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಂಡವು. ನಂತರದ ದಿನಗಳಲ್ಲಿ ಹೊಸಬರ ಸಿನಿಮಾಗಳ ಮೇಲೆ ಎಲ್ಲರೂ ತಿರುಗಿ ನೋಡುವಂತಾಯಿತು. ನಿರೀಕ್ಷೆ ಸುಳ್ಳಾಗಲಿಲ್ಲ. ಕುತೂಹಲಕ್ಕೆ ಮೋಸ ಆಗಲಿಲ್ಲ. ಹೊಸಬರು ಮ್ಯಾಜಿಕ್‌ ಮಾಡುತ್ತಾ ಹೋದರು. ಬಹುತೇಕ ಹೊಸಬರ ಸಿನಿಮಾಗಳು ಗೆಲುವಿನ ಹಾದಿಯಲ್ಲಿ ಸಾಗುತ್ತ ಬಂದವು. ಆ ಬಳಿಕ ವಾಹಿನಿಗಳು ಕೂಡ ಒಳ್ಳೆಯ ಕಥಾಹಂದರ ಇರುವ ಸಿನಿಮಾಗಳನ್ನು ಖರೀದಿಸುವಲ್ಲಿ ಮುಂದಾದವು. ಈ ನಿಟ್ಟಿನಲ್ಲಿ ಸ್ಟಾರ್ ಗಳು ಕೂಡ ಹೊಸಬರ ಸಿನಿಮಾಗಳ ಬಗ್ಗೆ ಗಂಭೀರವಾಗಿಯೇ ಪರಿಗಣಿಸತೊಡಗಿದರು.

ಸುದೀಪ್‌, ದರ್ಶನ್‌, ಶಿವರಾಜಕುಮಾರ್‌, ಪುನೀತ್‌ರಾಜಕುಮಾರ್‌, ಯಶ್‌ ಸೇರಿದಂತೆ ಹಲವು ಸ್ಟಾರ್‌ ನಟರು ಹೊಸಬರ ಸಿನಿಮಾಗಳನ್ನು ಪ್ರೋತ್ಸಾಹಿಸಿದರು. ಹೊಸಬರ ಚಿತ್ರಗಳು ಬಿಡುಗಡೆ ಆಗುತ್ತಿವೆ ಅಂದಾಕ್ಷಣ, ಸ್ಟಾರ್ಗಳು ಕೂಡ ಯೋಚಿಸುವಂತಹ ಸಂದರ್ಭವೂ ಬಂದು ಹೋಯ್ತು. ಒಂದು ಕಾರ್ಯಕ್ರಮದಲ್ಲಿ ಸ್ವತಃ ಸುದೀಪ್‌ ಅವರೇ, ಹೊಸಬರ ಚಿತ್ರಗಳು ಬಿಡುಗಡೆ ಆಗುತ್ತಿವೆ ಆಂದಾಗ, ನಾವು ಆವರ ಜೊತೆ ಪೈಪೋಟಿಗೆ ನಿಲ್ಲಬೇಕಾ? ಬೇಡವಾ? ಅನ್ನುವ ಪ್ರಶ್ನೆ ಎದುರಾಗಿದೆ ಎಂದು ಹೇಳುವ ಮೂಲಕ ಹೊಸಬರಲ್ಲಿರುವ ಪ್ರತಿಭೆಯನ್ನು ಕೊಂಡಾಡಿದ್ದರು.

ಈಗ ಹೊಸ ಸುದ್ದಿಯೆಂದರೆ, ಡಿಜಿಟಲ್‌ ಫ್ಲಾಟ್‌ಫಾರ್ಮ್ನಲ್ಲೂ ಹೊಸಬರ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಖರೀದಿಗೆ ಅಲ್ಲದಿದ್ದರೂ, ಶೇರುವಾರು ಅಡಿ ಸಿನಿಮಾಗಳನ್ನು ತಮ್ಮ ವೇದಿಕೆಯಲ್ಲಿ ತೋರಿಸುವ ಪ್ರಯತ್ನ ನಡೆದಿದೆ. ಹೌದು, ಈಗಾಗಲೇ ಅಮೆಜಾನ್‌ ಪ್ರೈಮ್‌ನಲ್ಲಿ ಹಲವು ಹೊಸಬರ ಚಿತ್ರಗಳು ರಾರಾಜಿಸುತ್ತಿವೆ. ಕೆಲವು ಚಿತ್ರಗಳು ಇಂತಿಷ್ಟು ಮೊತ್ತಕ್ಕೆ ಮಾರಾಟವಾದರೆ, ಇನ್ನೂ ಕೆಲವು ಸಿನಿಮಾಗಳು ವೀಕ್ಷಣೆ ಪಡೆದ ಆಧಾರದ ಮೇಲೆ ಇಂತಿಷ್ಟು ಶೇರು ಎಂಬ ಮಾತಿನ ಪ್ರಕಾರ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸಿಗುತ್ತಿವೆ.

ಈಗಾಗಲೇ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟಾರ್ ಸಿನಿಮಾಗಳ ಜೊತೆಯಲ್ಲಿ ಹೊಸಬರ ಚಿತ್ರಗಳಿಗೂ ಬೇಡಿಕೆ ಇದೆ. ದಿನ ಕಳೆದಂತೆ ಹೊಸಬರ ಸಿನಿಮಾಗಳು ಸೇರ್ಪಡೆಯಾಗುತ್ತಿವೆ. ಇತ್ತೀಚೆಗೆ “ದಿಯಾ’ ಹಾಗು “ಲವ್‌ ಮಾಕ್ಟೇಲ್‌ ‘ ಚಿತ್ರಗಳಿಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದೇ ತಡ, ಆ ಚಿತ್ರಗಳು ಅಮೆಜಾನ್‌ ಪ್ರೈಮ್‌ನಲ್ಲಿ ಕಾಣುವಂತಾಯಿತು.

Advertisement

ಜೊತೆ ಜೊತೆಯಲ್ಲೇ “ಮಾಲ್ಗುಡಿ ಡೇಸ್‌ ‘, “ನಮ್‌ ಗಣಿ ಬಿಕಾಂ ಪಾಸ್‌ ‘, “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ‘, “ಚೀಟರ್‌ ರಾಮಾಚಾರಿ ‘, “ಆಕ್ಟೋಪಸ್‌ ‘, “ಹ್ಯಾಪಿ ಬರ್ತ್‌ ಡೇ ‘, “ಯಾನ ‘, “ಬಜಾರ್‌ ‘, “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ‘, “ಸಂಕಷ್ಟಕರ ಗಣಪತಿ ‘, “ರತ್ನಮಂಜರಿ ‘, “ಗಿರ್‌ಗಿಟ್ಲೆ ‘, “ನೋ ಎಂಟ್ರಿ ‘, “ಗಂಟುಮೂಟೆ ‘, “ಚತುರ್ಭುಜ’, “ಸಿ ಪ್ಲಸ್‌ ಪಸ್ಲಸ್‌’, “ಪ್ರೀತಿಯಿಂದ ‘, “ನವರಾತ್ರಿ ‘, “ವರ್ಧನ ‘, “ಒಂಥರಾ ಬಣ್ಣಗಳು ‘,”ಕರ್ಮ ‘, “ಗರ್ಭದ ಗುಡಿ ‘, “ಸಂಜೆಯಲ್ಲಿ ಅರಳಿದ ಹೂವು ‘ ಹೀಗೆ ನೂರಕ್ಕು ಹೆಚ್ಚು ಕನ್ನಡದ ಹೊಸಬರ ಚಿತ್ರಗಳು ಅಮೆಜಾನ್‌ ಪ್ರೈಮ್‌ನಲ್ಲಿವೆ. ಇತ್ತೀಚೆಗಷ್ಟೇ ಹೊಸಬರ “ನಮ್‌ ಗಣಿ ಬಿಕಾಂ ಪಾಸ್‌ ‘ ಚಿತ್ರ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಲಭ್ಯವಿದ್ದು, ಟಾಪ್‌ ಟೆನ್‌ನಲ್ಲಿದೆ. ಹಾಗೆಯೇ “ರತ್ನಮಂಜರಿ’, “ಗಿರ್‌ಗಿಟ್ಲೆ’ ಹೊಸಬರ ಸಿನಿಮಾಗಳೂ ಹೆಚ್ಚು ವೀಕ್ಷಣೆಯಲ್ಲಿವೆ. ಹೊಸಬರ ಸಿನಿಮಾಗಳಿಗೆ ಸದ್ಯಕ್ಕೆ ಡಿಜಿಟಲ್‌ನಲ್ಲೂ ಮಾರ್ಕೆಟ್‌ ಹೆಚ್ಚುತ್ತಿದೆ. ಸ್ಟಾರ್ ಸಿನಿಮಾಗಳೊಂದಿಗೆ ಹೊಸಬರು ಕೂಡ ನಾವೇನ್‌ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next