ಮಂಡ್ಯ: ಬಡವರು ಮತ್ತು ಕೃಷಿ ಕೂಲಿಕಾರರಿಗೆ 2 ಲಕ್ಷ ರೂ.ಗಳವರೆಗೆ ಸಾಲ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಸೋಮವಾರ ಲೀಡ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೆರವಣಿಗೆಯಲ್ಲಿ ತೆರಳಿ ಲೀಡ್ ಬ್ಯಾಂಕ್ ಮುಂದೆ ಕೆಲ ಸಮಯ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ನೀತಿಯನ್ವಯ ಆರ್ಥಿಕ ಸ್ವಾವಲಂಬನೆಗೆ ಬಡತನ ಹೋಗಲಾಡಿಸಲು ಬಡವರು ಮತ್ತು ಕೂಲಿಕಾರರ ಹೆಸರಿನಲ್ಲಿ ಸರ್ಕಾರಗಳು ಸಾವಿರಾರು ಕೋಟಿ ರೂ. ಖರ್ಚು ಮಾಡಲು ಎಲ್ಲ ಬ್ಯಾಂಕುಗಳಿಗೂ ನಿರ್ದೇಶನ ಮಾಡುತ್ತವೆ. ಆದರೆ ಬಲಾಡ್ಯರೇ ಸಾಲ ಸೌಲಭ್ಯಗಳನ್ನೆಲ್ಲಾ ಬಾಚಿಕೊಂಡು ಬಲಿಷ್ಠ ಕೂಟ ದೊಡ್ಡದಾಗಿ ಬೆಳೆಯುತ್ತಿದೆ. ಅದರಂತೆ ಗಂಭೀರವಾಗಿ ಬಡತನ ಹೆಚ್ಚುತ್ತಿದೆ. ಬ್ಯಾಂಕುಗಳಲ್ಲಿ ಸಾಲ ಕೇಳಿದರೆ ಹೊರ ದಬ್ಬುತ್ತಿದ್ದಾರೆ ಎಂದು ಆರೋಪಿಸಿದರು.
ಆರ್ಥಿಕವಾಗಿ ಸದೃಢಗೊಳ್ಳಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನೀತಿಯನ್ವಯ ಜಿಲ್ಲೆ ಅಭಿವೃದ್ಧಿ ಹೊಂದಲು ಎಲ್ಲ ಬ್ಯಾಂಕ್‌ಗಳು ದೇವರಾಜ ಅರಸು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲಗಳಿಗೆ ಅರ್ಜಿ ಹಾಕಿದವರಿಗೆ 2 ಲಕ್ಷ ರೂ. ವರೆಗೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಸಬ್ಸಿಡಿ ಸಹಿತ ಸಾಲ ನೀಡಿ: ಜಿಲ್ಲೆಯ ಎಲ್ಲ ಬ್ಯಾಂಕ್ ಗಳು ಭದ್ರತಾ ರಹಿತ, ಸಬ್ಸಿಡಿ ಸಹಿತ ಸಾಲ ನೀಡುವಂತೆ ಆದೇಶ ನೀಡಬೇಕು. ಈಗಾಗಲೇ ಹಲವು ಕೂಲಿಕಾರರಿಗೆ ಸಾಲ ನೀಡಿದ್ದು, ಉಳಿದಿರುವ ಕೂಲಿಕಾರರಿಗೆ ಸಾಲ ನೀಡಲು ಆದೇಶ ನೀಡಬೇಕು. ಜಿಲ್ಲೆಯ ವಿವಿಧ ಗ್ರಾಮಗಳ ಕೃಷಿ ಕೂಲಿಕಾರರಿಗೆ ಒಂದು ವಾರದಲ್ಲಿ ಸಾಲ ನೀಡುವಂತೆ ಆದೇಶಿಸಬೇಕು. ಮೊದಲು ಸಾಲ ನೀಡಿ ನಂತರ ಸಬ್ಸಿಡಿ ಜಮೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಈಡೇರಿಸಿ: ಸೇವಾ ಬ್ಯಾಂಕ್ ಕಾಯ್ದೆ ಅನ್ವಯ ಬ್ಯಾಂಕ್ ವ್ಯವಹಾರದ ಗಡಿ ನಿಗದಿಪಡಿಸಿ ಅದರೊಳಗೆ ಬರುವ ಹಳ್ಳಿ, ಪಟ್ಟಣಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಒಂದು ವಾರದೊಳಗೆ ಎಲ್ಲ ಬ್ಯಾಂಕ್‌ಗಳ ಮುಂದೆ ನಮೂದಿಸಬೇಕು. ಖಾತೆ ತೆರೆಯಲು ಅರಿವು ಮೂಡಿಸಬೇಕು. ಹಣಕಾಸು ಮತ್ತು ಬ್ಯಾಂಕ್ ವ್ಯವಹಾರ ಪ್ರತ್ಯೇಕವಾಗಿ ವಿಂಗಡಿಸಬೇಕು. ಸಂಜೆ 5.30ರವರೆಗೂ ಗ್ರಾಹಕರಿಗೆ ಅವಕಾಶ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ
ಪುಟ್ಟಮಾಧು, ಬಿ.ಹನುಮೇಶ್, ಕೆ.ಬಸವರಾಜು, ಬಿ.ಎಂ.ಶಿವಮಲ್ಲಯ್ಯ, ಎನ್.ಸುರೇಂದ್ರ, ಸಿ. ಕುಮಾರಿ, ಅನಿತಾ, ಎಚ್.ಸಿ.ನಾಗರಾಜು, ಅಮಾಸಯ್ಯ, ರಾಜು, ಗೋವಿಂದ್, ಶುಭಾವತಿ ನೂರಾರು ಮಹಿಳೆಯರು ಭಾಗವಹಿಸಿದ್ದರು.