ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಎಂದು ನೋಟಿಫೈ ಮಾಡಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮಾರ್ಗದಲ್ಲಿರುವ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮದ್ಯ ಮಳಿಗೆದಾರರ ಸಂಘಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ಸೋಮವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಸೇರಿದ ನಾನಾ ಜಿಲ್ಲೆಗಳ ಸಾವಿರಾರು ಮಂದಿ ಮದ್ಯ ಮಳಿಗೆ ವ್ಯಾಪಾರಿಗಳು ಕೂಡಲೇ ಡಿನೋಟಿಫೈ ಆದೇಶ ಹೊರಡಿಸಿ ಬಾರ್ ಆಂಡ್ ರೆಸ್ಟೋರೆಂಟ್‌ಗಳು ಮತ್ತೆ ಕಾರ್ಯಾರಂಭ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ಸಾಧ್ಯವಾಗದಿದ್ದರೆ ಬಾರ್ ಮಾಲೀಕರಿಗೆ ಪರಿಹಾರ ನೀಡುವ ಅಥವಾ ಪರ್ಯಾಯ ಉದ್ಯೋಗ ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾಕಾರರು ನಗರ ರೈಲು ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟು ಮುಖ್ಯಮಂತ್ರಿಯವರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮಾರ್ಗಮಧ್ಯದಲ್ಲೇ ತಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗದ ಚಳ್ಳಕೆರೆಯ ಎಲ್.ಮಾರುತಿ, ಕಳೆದ ಹತ್ತು ದಿನಗಳಿಂದ ಬಾರ್ ಮತ್ತು ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿದ್ದು, ಪ್ರತಿ ದಿನ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಇದು ಹಲವರಿಗೆ ಕುಲಕಸುಬಿನಂತಿದ್ದು, ಬೇರೆ ಉದ್ಯೋಗದ ಪರಿಣಿತಿ ಹೊಂದಲು ಸಾಧ್ಯವಾಗಿಲ್ಲ. ದಿಢೀರ್ ಮಳಿಗೆ ಮುಚ್ಚಿಸಿರುವುದರಿಂದ ಕುಟುಂಬಸ್ಥರು ಉಪವಾಸ ಬೀಳುವಂತಾಗಿದೆ ಎಂದು ಹೇಳಿದರು.
ದೇಶದ ಇತರೆ ಕೆಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರವೇ ಹೆದ್ದಾರಿ ಡಿನೋಟಿಫೈ ತೀರ್ಮಾನ ಕೈಗೊಂಡಿದೆ .ಅದೇ ಕ್ರಮವನ್ನು ರಾಜ್ಯದಲ್ಲೂ ಕೈಗೊಂಡು ಮಳಿಗೆ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹೆದ್ದಾರಿಯಲ್ಲಿ ಮದ್ಯ ಮಾರಾಟ ಮಾಡುವುದಕ್ಕೂ, ಅಪಘಾತಗಳು ಸಂಭವಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಹೆದ್ದಾರಿಯಲ್ಲಿ ಮದ್ಯ ಲಭ್ಯವಿಲ್ಲವೆಂದರೆ ಬೇರೆ ಕಡೆ ಇರುವ ಬಾರ್‌ಗೆ ಹೋಗಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರೂ ಇದ್ದಾರೆ. ಅವೈಜ್ಞಾನಿಕ ತೀರ್ಮಾನ ಕೈಬಿಡಬೇಕು.
-ವೆಂಕಟೇಶ್, ಬಾರ್ ಮಾಲೀಕ