ಸಾಗರ: ದಾಖಲೆ ಸರಿ ಇದ್ದರೂ ನಮ್ಮ ಜಾಗದ ಬಗ್ಗೆ ತಕರಾರು ತೆಗೆದು, ಪ್ರತಿಬಂಧಕಾಜ್ಞೆ ಮೀರಿ ನಮ್ಮ ಜಾಗದಲ್ಲಿ ಪ್ರತಿಭಟನೆ ಮಾಡಿರುವ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಬಿಜೆಪಿ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ವಿಜಯಕುಮಾರ್ ಪಾಟೀಲ್ ಒತ್ತಾಯಿಸಿದ್ದಾರೆ.
ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜಾಗವನ್ನು ಬಂದೋಬಸ್ತು ಮಾಡಿಕೊಳ್ಳಲು ಕಾಂಪೌಂಡ್ ನಿರ್ಮಿಸುತ್ತಿರುವ ಸಂದರ್ಭದಲ್ಲಿ ಅನಧಿಕೃತ ಪ್ರವೇಶ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ನಗರದ ಬಿ.ಎಚ್. ರಸ್ತೆಯ ಸ.ನಂ. 5/4 ರಲ್ಲಿ 13.12 ಗುಂಟೆ ಜಾಗವನ್ನು ನಾವು ಖರೀದಿ ಮಾಡಿದ್ದೇವೆ. ಜಾಗಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳಿವೆ. 1959-60 ರಿಂದ ರಾಘವೇಂದ್ರ ಆಚಾರ್ ಎಂಬುವವರ ಹೆಸರಿನಲ್ಲಿ ಪಹಣಿ ಇದೆ. ಈ ಜಾಗವನ್ನು 2019 ರ ಏಪ್ರಿಲ್ 8 ರಂದು ನಾವು ಖರೀದಿ ಮಾಡಿದ್ದೇವೆ. ನಾವು ಖರೀದಿ ಮಾಡಿದ ಜಾಗದಲ್ಲಿ ಜನಪ್ರಿಯ ಮಟನ್ ಸ್ಟಾಲ್‌ನವರು ಅಕ್ರಮವಾಗಿ ಅಂಗಡಿ ನಿರ್ಮಿಸಿದ್ದಾರೆ. ಕುಮಾರ್ ಎಂಬ ಇನ್ನೋರ್ವರು ಜಲ್ಲಿ, ಇಟ್ಟಿಗೆ ಇನ್ನಿತರ ಇಳಿಸಿಕೊಂಡಿದ್ದಾರೆ. ಈ ಬಗ್ಗೆ ನಗರಸಭೆಗೆ ದೂರು ನೀಡಲಾಗಿತ್ತು. ಅವರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಮಟನ್ ಸ್ಟಾಲ್‌ಗೆ ಎರಡು ವರ್ಷದಿಂದ ಲೈಸೆನ್ಸ್ ನೀಡಿಲ್ಲ ಎಂದು ತಿಳಿಸಿದರು.
ಜಾಗವನ್ನು ಪುನರ್ ಸರ್ವೇ ಮಾಡಲು ಮುಂದಾಗಿ ನ್ಯಾಯಾಲಯದಿಂದ ಇಂಜೆಕ್ಷನ್ ಆರ್ಡರ್ ತರಲಾಗಿತ್ತು. ಪೊಲೀಸ್ ರಕ್ಷಣೆಯಲ್ಲಿ ಸೋಮವಾರ ಜಾಗಕ್ಕೆ ಕಾಂಪೌಂಡ್ ನಿರ್ಮಿಸುತ್ತಿರುವಾಗ ಸ್ಥಳಕ್ಕೆ ಬಂದು ಸಂಸದರು, ಮಾಜಿ ಶಾಸಕರು ಪ್ರತಿಭಟನೆ ನಡೆಸಿದ್ದು ಖಂಡನೀಯ. ನಮ್ಮ ಜಾಗಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ಕಚೇರಿ, ಸರ್ವೇ ಇಲಾಖೆಯಲ್ಲಿ ದಾಖಲೆ ಇದೆ. ಈ ಸಂಬಂಧ ನಗರಸಭೆಯಲ್ಲಿ ಯಾವುದೇ ದಾಖಲೆ ಇಲ್ಲ. ನಗರಸಭೆ ಜಾಗ ಎನ್ನುವುದಕ್ಕೆ ದಾಖಲೆ ಕೊಡಿ ಎಂದು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ದಾಖಲೆ ಇಲ್ಲದೆ ಇರುವುದರಿಂದ ನಗರಸಭೆ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಹೆಸರಿನಲ್ಲಿರುವ ಜಾಗವನ್ನು ಅಕ್ರಮ ಎಂದು ಪ್ರತಿಭಟನೆ ಮಾಡಿರುವ ಮಾಜಿ ಶಾಸಕ ಹಾಲಪ್ಪ ನಡೆ ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಬಾಲಕೃಷ್ಣ, ಚಿಂಟೂ ಸಾಗರ್ ಹಾಜರಿದ್ದರು.