ಬೀದರ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದು, ಆಯುರ್ವೇದ ಔಷಧ ಹೆಚ್ಚು ಪರಿಣಾಮಕಾರಿ ಎಂಬುದು ವೈದ್ಯ ಲೋಕವೇ ಪ್ರಚಾರಪಡಿಸಿದೆ. ಇದೀಗ ಜೀವಕ್ಕೆ ಕಂಟಕವಾಗುತ್ತಿರುವ ಕೊರೊನಾ ವಿರುದ್ಧ ಸುರಕ್ಷತೆಗಾಗಿ ಕೆಎಂಎಫ್ ಬಿಡುಗಡೆ ಮಾಡಿರುವ “ಆಯುರ್ವೇದಿಕ್ ಗುಣ ಮತ್ತು ಪೌಷ್ಟಿಕಾಂಶವುಳ್ಳ’ ಹಾಲು ಉತ್ಪನ್ನಗಳಿಗೆ ರಾಜ್ಯಾದ್ಯಂತ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.
ಕೋವಿಡ್ ಸೋಂಕಿನ ಎರಡನೇ ಅಲೆ ಆರ್ಭಟದ ಈ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ತೀವ್ರ ಅಗತ್ಯವಿದ್ದು, ಸದ್ಯ ಆಯುರ್ವೇದಿಕ್ ಔಷಧವೊಂದೇ ಸುಲಭ ಮಾರ್ಗವಾಗಿದೆ. ಹಾಗಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಬಲ್ಲ ಔಷಧಿಧೀಯ ಉತ್ಪನ್ನ ಬಳಸಿ ಕೆಎಂಎಫ್ 5 ಫ್ಲೆàವರ್‌ಗಳಲ್ಲಿ ಆಯುರ್ವೇದಿಕ್ ಹಾಲು ತಯಾರಿಸಿದೆ. ಆರಂಭಿಕ ದಿನಗಳಲ್ಲಿ ಈ ಉತ್ಪನಕ್ಕೆ ಹೆಚ್ಚು ಬೇಡಿಕೆ ಇರಲಿಲ್ಲ.
ಆದರೆ, ಸೋಂಕು ಗಂಭೀರ ಸ್ವರೂಪಕ್ಕೆ ತಿರುಗಿದ ಬಳಿಕ ಬೀದರ ಜಿಲ್ಲೆ ಸೇರಿ ರಾಜ್ಯದೆಲ್ಲೆಡೆ ಹೆಚ್ಚು ಬೇಡಿಕೆ ಬರುತ್ತಿದೆ. ಆಕಳ ಹಾಲಿನಲ್ಲಿ ಕಷಾಯ, ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ ಮತ್ತು ಅರಿಶಿಣ ಅಂಶ ಹೊಂದಿರುವ ವಿವಿಧ ಫ್ಲೆàವರ್‌ಗಳ ಪ್ರೋಟೀನ್ ಮಿಲ್ಕ್ನ್ನು ಕೆಎಂಎಫ್ ಹೊರ ತಂದಿದೆ. ಆರೋಗ್ಯಕರವಾದ ಈ ಉತ್ಪನ್ನ ಜನರಿಗೆ ಸುಲಭವಾಗಿ ಕೈಗೆಟಬೇಕೆಂಬ ಉದ್ದೇಶದಿಂದ 20 ರೂ.ಗಳಲ್ಲಿ 200 ಮಿ.ಲೀನ ಮಿಲ್ಕ್ ಬಾಟಲ್ ತಯಾರಿಸಲಾಗುತ್ತಿದ್ದು, ರಾಜ್ಯದ ಪ್ರತಿ ನಂದಿನಿ ಬೂತ್‌ಗಳಲ್ಲಿ ಈ ಆಯುರ್ವೇದಿಕ್ ಹಾಲು ಲಭ್ಯವಿದೆ. ಬೆಂಗಳೂರಿನ ಮದರ್ ಡೇರಿಯಲ್ಲಿ ಉತ್ಪಾದನೆ ಆಗುವ ಆಯುರ್ವೇದಿಕ್ ಹಾಲಿನ ಬಾಟಲ್ ಗಳನ್ನು ಡಿಪೋಗಳ ಮೂಲಕ ನಂದಿನಿ ಬೂತ್‌ಗಳಿಗೆ ಪೂರೈಸಲಾಗುತ್ತಿದೆ.
ಈ ಮಿಲ್ಕ್ ತುಂಬ ಹೈಜನಿಕ್ ಆಗಿದ್ದು, 6 ತಿಂಗಳ ತನಕ ಬಳಕೆಗೆ ಯೋಗ್ಯವಾಗಿರಲಿದೆ. ಸಿಂಗಲ್ ಬಾಟಲ್ ಅಥವಾ 6 ಬಾಟಲ್‌ನ ಪ್ಯಾಕ್ ಗಳು ಸಹ ಲಭ್ಯ ಇವೆ. ಸದ್ಯ ಬೀದರ ಜಿಲ್ಲೆಯಲ್ಲಿ ನಿತ್ಯ 300 ಪ್ಯಾಕ್‌ಗಳು ಮಾರಾಟವಾಗುತ್ತಿದ್ದರೆ, ರಾಜ್ಯದಲ್ಲಿ 15 ರಿಂದ 18 ಸಾವಿರ ಬಾಟಲ್‌ಗಳ ಬೇಡಿಕೆ ಇದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳು ಮತ್ತು ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರು ಹೆಚ್ಚಾಗಿ ಈ ಆಯುರ್ವೇದಿಕ್ ಹಾಲು ಸೇವಿಸುತ್ತಿದ್ದರೆ, ಸಾಮಾನ್ಯ ಜನರಿಂದಲೂ ಅ ಧಿಕ ಬೇಡಿಕೆ ಇದೆ.
ಸದ್ಯ ರಾಜ್ಯದಲ್ಲಿ ನಿತ್ಯ 25ರಿಂದ 30 ಸಾವಿರವರೆಗೆ ಪ್ರೋಟೀನ್ ಮಿಲ್ಕ್ನ ಅಗತ್ಯವಿದೆ. ಆದರೆ, ಲಾಕ್‌ಡೌನ್ ಹಿನ್ನೆಲೆ ಮಿಶ್ರಣಾಂಶಗಳ ಅಲಭ್ಯತೆ ಮತ್ತು ಪ್ಯಾಕಿಂಗ್‌ಗೆ ಸಮಸ್ಯೆಯಿಂದಾಗಿ ಬೇಡಿಕೆಯಷ್ಟು ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಬರುವ ದಿನಗಳಲ್ಲಿ ಜನರಿಗೆ ಬೇಕಾದ ಪ್ರಮಾಣದಲ್ಲಿ ಉತ್ಪಾದನೆ ಗುರಿ ಕೆಎಂಎಫ್ ಹೊಂದಿದೆ. ದೇಶದಲ್ಲೇ ಗುಣಮಟ್ಟದ ನಂದಿನಿ ಹಾಲಿಗೆ ಹೆಸರುವಾಸಿಯಾಗಿರುವ ಕೆಎಂಎಫ್ ಈಗ ಜನರ ಆರೋಗ್ಯದ ದೃಷ್ಟಿಯಿಂದ ಆಯುರ್ವೇದಿಕ್ ಗುಣವುಳ್ಳ ಮಿಲ್ಕ್ ಹೊರ ತಂದು ಗಮನ ಸೆಳೆದಿದೆ. ಅರಿಶಿಣ ಅಂಶವುಳ್ಳ ಮಿಲ್ಕ್ ಮಾತ್ರ ತಂದಿದ್ದ ಗುಜರಾತ್‌ನಲ್ಲಿಯೂ ಕೆಎಂಎಫ್ ಮಾದರಿಯಲ್ಲಿ ಎಲ್ಲ ಫ್ಲೆವರ್‌ವುಳ್ಳ ಹಾಲು ಬಿಡುಗಡೆ ಮಾಡಲಾಗಿದೆ.