ಕೆ.ಆರ್.ನಗರ: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಜ್ಯ ವಕೀಲರ ಸಂಘ ನಡೆಸುತ್ತಿರುವ ಪ್ರತಿಭಟನೆಗೆ ಕೆ. ಆರ್.ನಗರ ತಾಲೂಕು ವಕೀಲರ ಸಂಘದ ವತಿ ಯಿಂದ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ದಿಲೀಪ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿಯಿಂದ ನ್ಯಾಯಾಲಯದ ಆವರಣದವರೆಗೆ ಪ್ರತಿಭಟನೆ ನಡೆಸಿದರು.
ಸರ್ಕಾರದ ನೌಕರರಿಗೆ ತೊಂದರೆಯಾದಾಗ ಅವರ ರಕ್ಷಣೆಗೆ ಕಾಯ್ದೆಯನ್ನು ರೂಪಿಸಿರುವ ಸರ್ಕಾರ ಸಾರ್ವಜನಿಕರ ರಕ್ಷಣೆಗಾಗಿ ಸದಾ ದುಡಿಯುತ್ತಿರುವ ವಕೀಲರಿಗೆ ಯಾವುದೇ ಕಾಯ್ದೆಯನ್ನು ರೂಪಿಸಿಲ್ಲ ಎಂದು ದೂರಿದ ವಕೀಲರು ಆಗಿಂದಾಗ್ಗೆ ಅಲ್ಲಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ಸರ್ಕಾರ ವಕೀಲರಿಗೆ ಅನುಕೂಲವಾಗುವಂತಹ ಕಾಯ್ದೆ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.
ವಕೀಲರ ಸಂರಕ್ಷಣಾ ಕಾಯ್ದೆಯ ಕರಡು ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ ವಕೀಲರ ಸಂಘದ ಪದಾಧಿಕಾರಿಗಳು ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಇದನ್ನು ಉಭಯ ಸದನಗಳಲ್ಲಿ ಮಂಡನೆ ಮಾಡಿ ಒಪ್ಪಿಗೆ ಪಡೆದು ವಕೀಲರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಎಸ್. ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ದಿಲೀಪ್, ಉಪಾಧ್ಯಕ್ಷ ಸಿ.ಕೆ.ಮಂಜುನಾಥ್, ಕಾರ್ಯದರ್ಶಿ ನೂತನ್‌ಕುಮಾರ್, ಹಿರಿಯ ವಕೀಲರಾದ ಕೆ.ಸಿ.ಶಿವಕುಮಾರ್, ಎಸ್.ಎಸ್.ಗಾಂಧಿ, ಕೆ.ಪಿ. ಮಂಜುನಾಥ್, ಎನ್.ಪ್ರಸಾದ್, ಕೆ.ವಿ.ಮಹೇಶ್, ದಯಾನಂದ್, ಕೆ.ಎನ್.ಸತೀಶ್, ಮಹದೇವಸ್ವಾಮಿ, ಕೆ.ಎನ್.ದಿನೇಶ್, ಎ.ಎಸ್.ಯೋಗೇಶ್, ಎ.ತಿಮ್ಮಪ್ಪ, ಎಚ್.ಕೆ.ಹರೀಶ್, ಚಂದ್ರಮೌಳಿ, ಜಿ.ಎಲ್.ಧರ್ಮ, ಉದಯ್, ಪೂರ್ಣಿಮಾ, ಶಿವಶಂಕರ್ ಇದ್ದರು.