Advertisement

ರೋಗ ನಿರೋಧಕ ಶಕ್ತಿವರ್ಧಕ ಔಷಧಕ್ಕೆ ಬೇಡಿಕೆ

11:00 PM Jul 09, 2020 | Sriram |

ಮಹಾನಗರ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳ ಮೊರೆ ಹೋಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

Advertisement

ಕೇಂದ್ರ ಸರಕಾರದ ಆಯುಷ್‌ ಇಲಾಖೆ (ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಶಿಫಾರಸು ಮಾಡಿದ ರೋಗ ನಿರೋಧಕ ಹೆಚ್ಚಳ ಮಾಡುವ ಔಷಧಗಳನ್ನು ಆಯುಷ್‌ ಇಲಾಖೆಯ ಮೂಲಕ ಜಿಲ್ಲಾ ಆಯುಷ್‌ ಆಸ್ಪತ್ರೆ ಹಾಗೂ ಜಿಲ್ಲೆಯ ವಿವಿಧೆಡೆ ಇರುವ ಸರಕಾರಿ ಆಯುರ್ವೇದ ಆಸ್ಪತ್ರೆ, ಆಯುಷ್‌ ಡಿಸ್ಪೆನ್ಸರಿಗಳಲ್ಲಿ ಉಚಿತವಾಗಿ ವಿತರಿಸಲಾಗುತ್ತಿದ್ದು, ಔಷಧಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ.

ಮಂಗಳೂರು ಲಾಲ್‌ಭಾಗ್‌ ಹ್ಯಾಟ್‌ಹಿಲ್‌ನಲ್ಲಿರುವ ಜಿಲ್ಲಾ ಸರಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆಯಲ್ಲಿಯೂ ಔಷಧಗಳನ್ನು ವಿತರಿಸಲಾಗುತ್ತಿದೆ.

50,000ಕ್ಕೂ ಹೆಚ್ಚು ಜನರಿಗೆ ಔಷಧ ವಿತರಣೆ
ಜಿಲ್ಲೆಗೆ ಇದುವರೆಗೆ ಆಯುಷ್‌ ಇಲಾಖೆಯ ಮೂಲಕ ಸುಮಾರು 60,000 ಮಂದಿಗೆ ಬೇಕಾದಷ್ಟು ಆಯುರ್ವೇದ ಮತ್ತು ಹೋಮಿಯೋಪತಿ ಔಷಧಗಳು ಪೂರೈಕೆಯಾಗಿವೆ. ಇದರಲ್ಲಿ ಈಗಾಗಲೇ 50,000ದಷ್ಟು ಜನರಿಗೆ ಔಷಧ ನೀಡಲಾಗಿದೆ.

ದಿನಕ್ಕೆ 3,000 ಮಂದಿಯಿಂದ ಬೇಡಿಕೆ
ಆಯುಷ್‌ ಔಷಧಗಳಿಗಾಗಿ ಮಂಗಳೂರು ನಗರ ಭಾಗದಿಂದ ದಿನವೊಂದಕ್ಕೆ 1,000ಕ್ಕೂ ಹೆಚ್ಚು ಮಂದಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಸುಮಾರು 3,000 ಮಂದಿಯಿಂದ ಬೇಡಿಕೆ ಬರುತ್ತಿದೆ. ಎಲ್ಲರ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮಹಮ್ಮದ್‌ ಇಕ್ಬಾಲ್‌ ತಿಳಿಸಿದ್ದಾರೆ.

Advertisement

ಕರೆ ಮಾಡಿ ಔಷಧ ಪಡೆಯಿರಿ
ಜಿಲ್ಲೆಯ ವಿವಿಧೆಡೆ ಇರುವ ಸರಕಾರಿ ಆಯುರ್ವೇದ ಆಸ್ಪತ್ರೆ, ಆಯುಷ್‌ ಡಿಸ್ಪೆನ್ಸರಿಗಳಲ್ಲಿ ಜನರ ದಟ್ಟಣೆ ತಡೆಯಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗುವುದಕ್ಕಾಗಿ ಮೊದಲು ಕರೆ ಮಾಡಿ ಹೆಸರು, ಆಧಾರ್‌ ಕಾರ್ಡ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಮೊದಲಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಆಯುಷ್‌ ಆಸ್ಪತ್ರೆ (0824-2453088) ಸಂಪರ್ಕಿಸಬಹುದು.

ಆಸ್ಪತ್ರೆಗಳಲ್ಲಿಯೂ ಬೇಡಿಕೆ
ಆಯುಷ್‌ ಇಲಾಖೆಯ ಮುಖಾಂತರ ನೀಡುವ ರೋಗ ನಿರೋಧಕ ಶಕ್ತಿವರ್ಧಕ ಔಷಧಗಳು ಮಾತ್ರ ವಲ್ಲದೆ ಇತರ ಖಾಸಗಿ ಆಯುರ್ವೇದ ಆಸ್ಪತ್ರೆಗಳ ಲ್ಲಿಯೂ ಇಂತಹ ಔಷಧಗಳಿಗೆ ಬೇಡಿಕೆ ಹೆಚ್ಚಿದೆ ಎನ್ನು ತ್ತಾರೆ ಆಯುರ್ವೇದ ಆಸ್ಪತ್ರೆಗಳ ಅಧಿಕಾರಿಗಳು.

ಪರಿಣಾಮ ಅಧ್ಯಯನ
ಆಯುಷ್‌ ಇಲಾಖೆಯಿಂದ ನೀಡಲಾಗುವ ರೋಗನಿರೋಧಕ ಶಕ್ತಿವರ್ಧಕ ಔಷಧವನ್ನು ಸೇವಿಸಿದವರು ಕೋವಿಡ್‌ ದಿಂದ ಎಷ್ಟರ ಮಟ್ಟಿಗೆ ಸುರಕ್ಷಿತರಾಗಿದ್ದಾರೆ, ಔಷಧ ಯಾವ ರೀತಿಯ ಪರಿಣಾಮ ಬೀರಿದೆ ಎಂಬಿತ್ಯಾದಿ ಮಾಹಿತಿ ಪಡೆಯಲು ಜಿಲ್ಲೆಯಲ್ಲಿ ಆಯುಷ್‌ ಇಲಾಖೆಯಡಿಯಲ್ಲಿ ಬರುವ ಹೋಮಿಯೋಪತಿ ಕಾಲೇಜುಗಳ ತಂಡ ನಿರ್ಧರಿಸಿದೆ. ಇದರಿಂದ ನಮ್ಮ ಜಿಲ್ಲೆಯಲ್ಲಿ ಆಯುಷ್‌ ಔಷಧಗಳ ಪರಿಣಾಮ ಗೊತ್ತಾಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೇಡಿಕೆ ಸಲ್ಲಿಕೆ
ಆರಂಭದ ದಿನಗಳಲ್ಲಿ ಕೋವಿಡ್‌ ವಾರಿಯರ್ಗಳಿಗೆ ಹೋಮಿಯೋಪತಿ ಮತ್ತು ಆಯುರ್ವೇದ ರೋಗ ನಿರೋಧಕ ಶಕ್ತಿ ವರ್ಧಕ ಔಷಧ ವಿತರಣೆ ಮಾಡಿದ್ದೆವು. ಅನಂತರ ಇತರ ಹಲವು ಇಲಾಖೆಗಳಿಗೂ ವಿತರಿಸಲಾಯಿತು. ಇದೀಗ ಕಳೆದ 15 ದಿನಗಳಿಂದ ಸಾರ್ವಜನಿಕರಿಗೂ ಆಯುಷ್‌ ಡಿಸ್ಪೆನ್ಸರಿಗಳ ಮೂಲಕ ಉಚಿತವಾಗಿ ವಿತರಿಸಲಾಗುತ್ತಿದೆ. ಆಯುಷ್‌ ಇಲಾಖೆ ನೀಡುವ ಮಾತ್ರೆಗಳು ಕೋವಿಡ್‌ ದಿಂದ ಶೇ. 100ರಷ್ಟು ಸುರಕ್ಷತೆ ನೀಡುತ್ತವೆ ಎಂದು ಹೇಳಲಾಗದು. ಇತರ ಮುಂಜಾಗ್ರತ ಕ್ರಮಗಳು ಕೂಡ ಅಗತ್ಯ. ಆದರೆ ಈ ಔಷಧಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿವೆ.
-ಡಾ| ಮಹಮ್ಮದ್‌ ಇಕ್ಬಾಲ್‌
ಜಿಲ್ಲಾ ಆಯುಷ್‌ ಅಧಿಕಾರಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next