Advertisement

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಂಸ್ಟೇಗೆ ಬೇಡಿಕೆ

11:56 PM Sep 16, 2020 | mahesh |

ಮಹಾನಗರ: ರಾಜ್ಯದ ಕರಾವಳಿ ಭಾಗವು ಪ್ರವಾಸಿ ತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ಆದರೆ ಕೊರೊನಾದಿಂದಾಗಿ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕೆ ಇಲಾಖೆ ಇದೀಗ ಮುಂದಾಗಿದೆ. ಅದರಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹೋಂಸ್ಟೇ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದೆ.

Advertisement

ದ.ಕ., ಉಡುಪಿ ಜಿಲ್ಲೆಗಳಲ್ಲಿ ಈಗ ಒಟ್ಟು 63 ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ದ.ಕ. ಜಿಲ್ಲೆಯ ಮಂಗಳೂರು ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿಯೇ 26 ಹೋಂ ಸ್ಟೇಗಳಿವೆ. ಅದೇ ರೀತಿ, ಬೆಳ್ತಂಗಡಿ ತಾಲೂಕಿನ ಕಲ್ಮಂಜ, ಮುಂಡಾಜೆಯಲ್ಲಿ ಬಂಟ್ವಾಳ ತಾಲೂಕಿನ ಅಡ್ಯನಡ್ಕ, ಬಡಗ ಕಜೆಕಾರ್‌, ಸುಳ್ಯ ತಾಲೂಕಿನ ಪೆರುವಾಜೆ, ಸಂಪಾಜೆಯಲ್ಲಿ ಒಂದೊಂದು ಹೋಂಸ್ಟೇಗಳಿವೆ. ಉಡುಪಿ ನಗರ, ತಾಲೂಕು ವ್ಯಾಪ್ತಿಯಲ್ಲಿ 17, ಕಾರ್ಕಳ ತಾಲೂಕಿ ನಲ್ಲಿ 8, ಕುಂದಾಪುರದಲ್ಲಿ 6 ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ.

ಕೊರೊನಾ ಕಾರಣದಿಂದಾಗಿ ಕೆಲವು ತಿಂಗಳು ಗಳಿಂದ ಪ್ರವಾಸಿಗರ ಕೊರತೆ ಇದ್ದು, ಎಲ್ಲ ಹೋಂಸ್ಟೇ ಗಳು ಬಾಗಿಲು ಮುಚ್ಚಿದ್ದವು. ಲಾಕ್‌ಡೌನ್‌ ಸಡಿಲಿಕೆಯ ಬಳಿಕ ಇದೀಗ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನಕ್ಕೆ ಆರಂಭವಾಗತೊಡಗಿವೆ.

ಹೋಂ ಸ್ಟೇ ನಿರ್ಮಾಣಕ್ಕೆ ಉತ್ತೇಜನೆ
ಹೀಗಿರುವಾಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಹೋಂಸ್ಟೇ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಉತ್ತೇಜನ ನೀಡಲು ಇಲಾಖೆ ಮುಂದಾಗಿದೆ. ಅದರಂತೆ ಉಭಯ ಜಿಲ್ಲೆಗಳಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಮಂದಿ ಹೋಂಸ್ಟೇ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.

ಹೋಂಸ್ಟೇಗಳಿಗೆ ಹೆಚ್ಚಿದ ಬೇಡಿಕೆ
ಕರಾವಳಿ ಪ್ರದೇಶಕ್ಕೆ ಪ್ರವಾಸಕ್ಕೆಂದು ಬರು ವವರು ಹೆಚ್ಚಾಗಿ ಈ ಭಾಗದ ಗುತ್ತಿನ ಮನೆ, ಪಾರಂಪರಿಕ ಹಳೆ ಮನೆ ಸಹಿತ ಗ್ರಾಮೀಣ ಶೈಲಿಯ ಹೋಂಸ್ಟೇಗಳಲ್ಲಿ ಇರಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಕರಾವಳಿ ಭಾಗದಲ್ಲಿ ತುಳುನಾಡ ಪಾರಂಪರಿಕ ಮನೆಗಳ ವಿನ್ಯಾಸದ ಹೋಂ ಸ್ಟೇಗಳಿಗೆ ಬೇಡಿಕೆ ಕಂಡುಬರುತ್ತಿದೆ. ಹೋಂಸ್ಟೇಗಳ ವಿನ್ಯಾಸಕ್ಕೆ ತಕ್ಕಂತೆ ಅವುಗಳ ದರಗಳಲ್ಲಿಯೂ ಬದಲಾವಣೆಯಾಗುತ್ತವೆ.

Advertisement

ಅನಧಿಕೃತ ಹೋಂ ಸ್ಟೇ ವಿರುದ್ಧ ಕ್ರಮ
ಹೋಂಸ್ಟೇಗೆ ಅನುಮತಿ ಪತ್ರ ಪಡೆಯಲು ಪೊಲೀಸ್‌ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳಿಂದ ನಿರಾಕ್ಷೇಪಣೆ ಪತ್ರ ಆವಶ್ಯಕ. ಮಹಾನಗರ ಪಾಲಿಕೆ ವ್ಯಾಪ್ತಿಯಾದರೆ ಮಂಗಳೂರು ಪೊಲೀಸ್‌ ಆಯ ಕ್ತರು ಹಾಗೂ ಮಹಾನಗರ ಪಾಲಿಕೆ, ಇದರ ಹೊರಗಿನ ವ್ಯಾಪ್ತಿಯಾದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಗ್ರಾ.ಪಂ., ನಗರಸಭೆ, ಪುರಸಭೆ ಯಿಂದ ನಿರಾಕ್ಷೇಪಣೆ ಪತ್ರ ಪಡೆಯಬೇಕು. ಅನಧಿಕೃತವಾಗಿ ಹೋಂಸ್ಟೇ ನಿರ್ಮಿಸಿದರೆ ಅಂತಹ ಮಾಲಕರ ವಿರುದ್ಧ ಕಠಿನ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಹೋಂಸ್ಟೇ ನಿರ್ಮಾಣ ವೇಳೆ ಕೆಲವೊಂದು ಷರತ್ತುಗಳಿವೆ. ಅದರಂತೆ ಯಾವುದೇ ಅನಪೇಕ್ಷಿತ ವಿದ್ಯಮಾನ, ವ್ಯವಹಾರಗಳಿಗೆ ಅಲ್ಲಿ ಆಸ್ಪದ ನೀಡಬಾರದು. ಪ್ರತಿ ಪ್ರವಾಸಿಗರಿಂದ ಗುರುತುಚೀಟಿ ಪಡೆದೇ ವಸತಿ ಸೌಲಭ್ಯ ನೀಡಬೇಕು. ಹೋಂಸ್ಟೇಗೆ ಬರುವ ಅತಿಥಿಗಳ ವಿವರ ಬಗ್ಗೆ ನೋಂದಣಿ ಮಾಡಬೇಕು.

ಪ್ರವಾಸೋದ್ಯಮಕ್ಕೆ ಆದ್ಯತೆ
ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ, ಪ್ರೋತ್ಸಾಹ ನೀಡುವ ಉದ್ದೇಶಗಳಿಂದ ಹೋಂಸ್ಟೇ ಯೋಜನೆಗಳಿಗೆ ಅನುಮೋದನೆ ನೀಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 32 ಹೋಂಸ್ಟೇಗಳಿದ್ದು, 15 ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯಲಿ 31 ಹೋಂಸ್ಟೇಗಳಿವೆ. ಅನುಮತಿ ಪಡೆಯದೇ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳನ್ನು ಪತ್ತೆ ಹಚ್ಚಿ ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.
-ಸೋಮಶೇಖರ್‌ ಬಿ.ಕೆ., ಸಹಾಯಕ ನಿರ್ದೇಶಕರು ದ.ಕ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ
-ಚಂದ್ರಶೇಖರ ನಾೖಕ್‌, ಸಹಾಯಕ ನಿರ್ದೇಶಕರು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next