Advertisement

ಶಹಾಬಾದ ಸರ್ಕಾರಿ ಶಾಲೆಗೆ ಡಿಮ್ಯಾಂಡ್‌

05:16 PM May 19, 2022 | Team Udayavani |

ಕಲಬುರಗಿ: ಈ ಶಾಲೆಯಲ್ಲಿ ಇಂಗ್ಲಿಷ್‌ ಸ್ಟೋರಿಗಳನ್ನು ಗೋಡೆ ಮೇಲೆಯೇ ಓದಬಹುದು. ಪ್ರತ್ಯೇಕ ಶಿಕ್ಷಕರು ಇಂಗ್ಲಿಷ್‌ ಬೋಧನೆ ಮಾಡುತ್ತಾರೆ. ಈ ಶಾಲೆಯಲ್ಲಿ ಪ್ರವೇಶ ಪಡೆಯಬೇಕಾದರೆ ರೋಸ್ಟರ್‌ ಅನುಸರಿಬೇಕಾದ ಸ್ಥಿತಿ ಎದುರಾಗಿದೆ. ಇಲ್ಲಿ ಕುಡಿಯುವ ನೀರಿನಿಂದ ಹಿಡಿದು ಎಲ್ಲ ಸೌಕರ್ಯಗಳನ್ನು ಮಾಡಲಾಗಿದೆ. ಖಂಡಿತವಾಗಿಯೂ ಇದು ಮಾದರಿ ಶಾಲೆ. ಇಷ್ಟೇ ಅಲ್ಲ ಪಕ್ಕಾ ಸರ್ಕಾರಿ ಶಾಲೆ.

Advertisement

ವಿಷಯ ಇಷ್ಟೇ ಆಗಿದ್ದರೆ ಸುದ್ದಿ ಮಾಡುವ ಅಗತ್ಯವೇ ಇರಲಿಲ್ಲ. ಅಚ್ಚರಿ ಸಂಗತಿ ಎಂದರೆ, ಶಾಲೆ ಆರಂಭವಾಗಿ ಮೂರು ದಿನವಾದರೂ ಈ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ಪಾಲಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇರುವ ಸೀಟು ಭರ್ತಿಯಾಗಿದೆ. 30 ಸೀಟುಗಳಿಗೆ 130 ಅರ್ಜಿಗಳು ಬಂದಿವೆ. ಪ್ರವೇಶ ಕೊಡಕ್ಕಾಗಲ್ಲ ಅಂದ್ರೂ ಜನ ಕೇಳ್ತಿಲ್ಲ. ಇದಕ್ಕಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು “ಏನ್ರಿ ಸರ್ಕಾರಿ ಶಾಲೆಗೆ ಈ ಪರಿ ಡಿಮ್ಯಾಂಡು? ಲಕ್ಕಿ ಡ್ರಾ ಮಾಡಿ ಪ್ರವೇಶ ಕೊಡಬೇಕು’ ಅಂತಾ ಶೀಘ್ರವೇ ಲಕ್ಕಿ ಡ್ರಾ ಏರ್ಪಡಿಸಲಿದ್ದಾರೆ.

ಇದಿಷ್ಟು ಜಿಲ್ಲೆಯ ಶಹಾಬಾದ ತಾಲೂಕಿನ ಶರಣ ನಗರದಲ್ಲಿರುವ ಜಿಪಿಎಸ್‌ ಶಾಲೆ ಎಂದೆ ಕರೆಯುವ ಹಳೆಯ ಶಾಲೆಯ ಸ್ಥಿತಿ. ಇದು ಕಲಬುರಗಿ ಗ್ರಾಮೀಣ ಶಾಸಕರ ಮಾದರಿ ಕನ್ಯಾ ಶಾಲೆಯೂ ಹೌದು. ಇಲ್ಲಿ 254 ಮಕ್ಕಳು ಓದುತ್ತಾರೆ. ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ಇದೆ. ಕಳೆದ ಎರಡು ವರ್ಷಗಳಿಂದ ಇಂಗ್ಲಿಷ್‌ ಮಾಧ್ಯಮವನ್ನು ಸರ್ಕಾರ ಆರಂಭಿಸಿದೆ. ಈ ಬಾರಿ ಒಂದು ಮತ್ತು ಎರಡನೇ ತರಗತಿಗೆ ಪ್ರವೇಶ ಶುರುವಾಗಿವೆ. ಈ
ಪ್ರವೇಶವೇ ಈಗ ದೊಡ್ಡ ಸದ್ದು ಮಾಡುತ್ತಿದೆ. ಇಡೀ ಜಿಲ್ಲೆಯಲ್ಲಿ ಚರ್ಚೆಯೂ ನಡೆದಿದೆ. ಖಾಸಗಿ ಶಾಲೆಗೆ ಇಲ್ಲದ ಡಿಮ್ಯಾಂಡು ಈ ಶಾಲೆಯಲ್ಲಿನ ಒಂದನೇ ತರಗತಿಗೆ ಶುರುವಾಗಿದೆ. ಪಾಲಕರು ಶಾಸಕರ ಶಿಫಾರಸು ಪತ್ರ ತಂದಾದರೂ ಪ್ರವೇಶ ಪಡೆಯುತ್ತೇವೆ ಎಂದು ಜೋರು ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ.

ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಕೆ
ಕಳೆದ ಮೂರು ದಿನಗಳಿಂದ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಪಾಲಕರು ತಮ್ಮ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದ ಒಂದನೇ ತರಗತಿಗೆ ಪ್ರವೇಶ ಪಡೆಯಲು ಬಡಿದಾಡುತ್ತಿದ್ದಾರೆ. ಈ ದೃಶ್ಯ ನೋಡಿದರೆ ಸರ್ಕಾರಿ ಶಾಲೆಯಲ್ಲೂ ಕಲಿಸಲು ಪಾಲಕರು ಮುಂದಾಗಿರುವುದು ನೋಡಿದರೆ ಸರ್ಕಾರಿ ಶಾಲೆಗಳಲ್ಲಿ ಇಂಗಿಷ್‌ ಮಾಧ್ಯಮ ಆರಂಭಿಸುವ ಸರ್ಕಾರದ ಸದಾಶಯ ಈಡೇರುತ್ತಿದೆ.

1942ರಲ್ಲಿ ಶಾಲೆ ಆರಂಭ
ಇದು ಬ್ರಿಟಿಷ್‌ರ ಕಾಲದ ಶಾಲೆ. 1942ರಲ್ಲಿ ಆರಂಭವಾಗಿದೆ. ಈಗಲೂ ಕಟ್ಟಡ ಸುಸ್ಥಿತಿಯಲ್ಲಿದೆ. 12 ವರ್ಷಗಳಿಂದ ಇಲ್ಲಿನ ವಾತಾವರಣ ಬದಲಾಗಿದೆ. ಪಾಠ ಪ್ರವಚನಗಳು ನಿತ್ಯ ನಡೆಯಬೇಕು. ಮಕ್ಕಳು ಶಾಲೆಗೆ ಬಂದೇ ಬರಬೇಕು. ಕುಡಿಯುವ ನೀರಿದೆ. ಶೌಚಾಲಯವಿದೆ. ಸಣ್ಣದೊಂದು ಉದ್ಯಾನವನವೂ ಇದೆ. ವಿದ್ಯುತ್‌ ಸಂಪರ್ಕವಿದೆ. ಗಾಳಿ ವ್ಯವಸ್ಥೆ ಇದೆ. ಕಳೆದ ವರ್ಷದಿಂದ ಇಂಗ್ಲಿಷ್‌ ಬೋಧನೆ ಶುರು ಮಾಡಿದಾಗಿನಿಂದಲೂ ಇಂಗ್ಲಿಷ ಕೂಡ ಚೆನ್ನಾಗಿ ಹೇಳಿ ಕೊಡಲಾಗುತ್ತಿವೆ ಎನ್ನುವ ಸುದ್ದಿ ತಾಲೂಕಿನಲ್ಲಿ ಹರಡಿದೆ. ಅದಕ್ಕಾಗಿ ಇಷ್ಟು ಡಿಮ್ಯಾಂಡ್‌. ಇದಕ್ಕೆ ನಮ್ಮ ಶಾಲೆಯ ಮುಖ್ಯಶಿಕ್ಷಕ ಶಿವಪುತ್ರಪ್ಪ ಕೋಣಿನ್‌ ಕಾರಣ ಎನ್ನುತ್ತಾರೆ ಇಂಗ್ಲಿಷ್‌ ಕಲಿಸುವ (ಮೂಲ ಕನ್ನಡ ಶಿಕ್ಷಕಿ) ಶಿಕ್ಷಕಿ ಅಂಜನಾ ದೇಶಪಾಂಡೆ

Advertisement

ಶಿಕ್ಷಕರನ್ನು ನೇಮಿಸಿ
ಈ ಎಲ್ಲ ಬೆಳವಣಿಗೆ ಮಧ್ಯೆ ಸರ್ಕಾರ ಪ್ರಾಯೋಗಿಕವಾಗಿ ಆರಂಭಿಸಿರುವ ಸರಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಇಂಗ್ಲಿಷ್‌ ಶಿಕ್ಷಕರ ನೇಮಕವನ್ನು ಇನ್ನೂ ಮಾಡಿಲ್ಲ. ಈ ಕೊರತೆಯ ಮಧ್ಯೆ ಕನ್ನಡ ಶಿಕ್ಷಕಿಯನ್ನು ಇಂಗ್ಲಿಷ್‌ ಪಾಠ ಮಾಡಿಸಲು ಹಚ್ಚಿ ಶಾಲೆಗೆ ಜನ ಬರುವಂತೆ ಮಾಡಿರುವ ಶ್ರಮದ ಶ್ರೇಯಸ್ಸು ಮುಖ್ಯ ಶಿಕ್ಷಕ ಶಿವಪುತ್ರಪ್ಪ ಕೋಣಿನ್‌ಗೆ ಸಲ್ಲಬೇಕು. ಜಿಲ್ಲೆಯಲ್ಲಿ ಪ್ರತಿ ತಾಲೂಕಿನ 1-2 ರಂತೆ ಇಂಗ್ಲಿಷ್‌ ಶಾಲೆ ಆರಂಭಿಸಲಾಗಿದೆ. ಪ್ರತ್ಯೇಕವಾದ ವ್ಯವಸ್ಥೆ ಇಲ್ಲ. ಇದ್ದುದ್ದರಲ್ಲೇ ಕನ್ನಡ ಸಾಲಿ ಮಾಸ್ತರಗಳೇ ಇಂಗ್ಲಿಷ್‌ ಮಾಧ್ಯಮವನ್ನು ಖಾಸಗಿ ಶಾಲೆಗಳಿಗೆ ಚಾಲೆಂಜ್‌ ಎನ್ನುವಂತೆ ಬೆಳೆಸುತ್ತಿದ್ದಾರೆ.

ಶಹಾಬಾದ ಸರ್ಕಾರಿ ಕಿರಿಯ ಕನ್ಯಾ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ತುಂಬಾ ಡಿಮ್ಯಾಂಡ್‌ ಬಂದಿದೆ. ಪಾಲಕರು ಹೆಚ್ಚು ಬೇಡಿಕೆ ಇಟ್ಟಿದ್ದಾರೆ. ಅರ್ಜಿಗಳು ಜಾಸ್ತಿ ಬಂದಿವೆ. ಮೇ 31ರ ವರೆಗೆ ಅರ್ಜಿ ತೆಗೆದುಕೊಂಡು ಬಂದ ಅರ್ಜಿಗಳನ್ನು ಲಕ್ಕಿ ಡ್ರಾ ಮುಖಾಂತರ ಮಕ್ಕಳನ್ನು ಆಯ್ಕೆ ಮಾಡಿ ಪ್ರವೇಶ ನೀಡಲಾಗುವುದು. ಇದರಲ್ಲಿ ಅಲ್ಲಿನ ಮುಖ್ಯಶಿಕ್ಷಕ ಶಿವಪುತ್ರಪ್ಪ ಕೋಣಿನ್‌ ಹಾಗೂ ಶಿಕ್ಷಕರ ಶ್ರಮವೂ ಇದೆ.
ಸಿದ್ದವೀರಯ್ಯ, ಬಿಇಒ, ಚಿತ್ತಾಪುರ

ನಮ್ಮ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಕಳೆದ ವರ್ಷದಿಂದ ಸರ್ಕಾರ ಪ್ರಾಯೋಗಿಕವಾಗಿ ಪ್ರತಿ ವರ್ಷ ಒಂದು ತರಗತಿಯಂತೆ ಹೆಚ್ಚಳ ಮಾಡುವ ಪ್ರಯತ್ನದೊಂದಿಗೆ ಇಂಗ್ಲಿಷ್‌ ಬೋಧನೆ ಶುರು ಮಾಡಲಾಗಿದೆ. ಈ ಬಾರಿ 1ನೇ ತರಗತಿಗೆ 30 ಪ್ರವೇಶ ಇದ್ದು, 130ಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಇನ್ನೂ ಬರುತ್ತಿವೆ. ಅದಕ್ಕೆ ಶಾಲೆಯಲ್ಲಿನ ಕಲಿಕೆ ಮತ್ತು ವಾತಾವರಣ ಕಾರಣ.
ಶಿವಪುತ್ರಪ್ಪ ಕೋಣಿನ್‌, ಮುಖ್ಯಶಿಕ್ಷಕ

ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next