ಮೈಸೂರು: ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವುದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗೆ ಬೇಡಿಕೆ ಬಂದಿದೆ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು. ಮೈಸೂರಿನ ರಾಜೇಂದ್ರ ನಗರದಲ್ಲಿ ಆರಂಭಿಸಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಎಲ್‌ಕೆಜಿ ಹಾಗೂ ಆಂಗ್ಲ ಮಾಧ್ಯಮ 1ನೇ ತರಗತಿ ಉದ್ಘಾಟಿಸಿ ಮಾತನಾಡಿದರು.
ಕಾನೂನು ತೊಡಕು ನಿವಾರಣೆ: ಸರ್ಕಾರಿ ಶಾಲೆಯ ಆದ್ಯತೆ ಮತ್ತು ಮಾನ್ಯತೆ ಹೆಚ್ಚಿಸಲು ಒಂದೇ ಸೂರಿನಡಿ ಪೂರ್ವ ಪ್ರಾಥಮಿಕದಿಂದ 12ನೇ ತರಗತಿ ವರೆಗೆ ಶಿಕ್ಷಣ ನೀಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇತ್ತು. ಕಾನೂನು ತೊಡಕುಗಳಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಆ ಕಾನೂನು ತೊಡಕು ನಿವಾರಣೆ ಮಾಡಿಕೊಂಡು ಸಂವಿಧಾನ ಬದ್ಧವಾಗಿ ಆರನೇ ತರಗತಿ ಮೇಲ್ಪಟ್ಟ ಶಿಕ್ಷಣ ಭದ್ರಗೊಳಿಸಲು ಸರ್ಕಾರ ಪೂರ್ವ ಪ್ರಾಥಮಿಕ ಶಾಲೆ ತೆರೆಯುವುದು ಅನಿವಾರ್ಯವಾಗಿದೆ ಎಂದರು.
ಸಾಕಷ್ಟು ಅನುಕೂಲ: ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕಕ್ಕೆ ದಾಖಲಾದ ಮಕ್ಕಳು ಅಲ್ಲೇ ಮುಂದುವರಿಯುತ್ತಾರೆ. ಹೀಗಾಗಿ ಶಾಲಾ ಶೈಕ್ಷಣಿಕ ಮೇಲುಸ್ತುವಾರಿ ಸಮಿತಿಗಳು ಆಸಕ್ತಿ ವಹಿಸುವ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮದ 1ನೇ ತರಗತಿ ಆರಂಭಿಸಿರುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಕನ್ನಡ ಮಾಧ್ಯಮಕ್ಕೆ ಸಮಸ್ಯೆ ಇಲ್ಲ: ಆಂಗ್ಲ ಮಾಧ್ಯಮ ತರಗತಿ ಆರಂಭಿಸುವುದರಿಂದ ಕನ್ನಡ ಮಾಧ್ಯಮ ಶಾಲೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನ ಮೇರೆಗೆ ರಾಜ್ಯದ ಯಾವುದೇ ಮೂಲೆಯಲ್ಲಿರುವ ಸಿಬಿಎಸ್‌ಇ, ಐಸಿಎಸ್‌ಇ, ಖಾಸಗಿ ಆಂಗ್ಲ ಮಾಧ್ಯಮ ಹಾಗೂ ಇಂಟರ್ ನ್ಯಾಷನಲ್ ಶಾಲೆಗಳಲ್ಲೂ ಕನ್ನಡ ಕಡ್ಡಾxಯಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗೆ ದಾಖಲಾಗುವ ಬಡ ಮಕ್ಕಳ ಭವಿಷ್ಯ ಉತ್ತಮಪಡಿಸಲು ಆಂಗ್ಲ ಮಾಧ್ಯಮ ಶಾಲೆ ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ನಗರಪಾಲಿಕೆ ಸದಸ್ಯ ಪ್ರದೀಪ್‌ಚಂದ್ರ, ಡಿಡಿಪಿಐ ಡಾ.ಪಾಂಡುರಂಗ, ಮೈಸೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಉದಯ ಕುಮಾರ್, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಬಸವರಾಜು ಮತ್ತಿತರರಿದ್ದರು.
ಖಾಸಗಿ ಶಾಲೆಯಷ್ಟೇ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿ¤ದೆ. ಸರ್ಕಾರಿ ಶಾಲೆಗಳಲ್ಲೂ ಉನ್ನತ ಶ್ರೇಣಿಯಲ್ಲಿ ಆಯ್ಕೆಯಾಗಿರುವ ಗುಣಮಟ್ಟದ ಶಿಕ್ಷಕಗಳಿದ್ದಾರೆ. ಹೀಗಾಗಿ ಗುಣಮಟ್ಟದ ಶಿಕ್ಷಣದ ಬಗ್ಗೆ ಪೋಷಕರು ಆತಂಕ ಪಡಬೇಕಿಲ್ಲ.
-ತನ್ವೀರ್‌ಸೇಠ್, ಶಾಸಕ