ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ವೇಳೆ ಕೆಲವರು ಕಬ್ಬು ಮತ್ತು ಕಬ್ಬು ತುಂಬಿದ ವಾಹನಗಳಿಗೆ ಹಾನಿ ಮಾಡುತ್ತಿದ್ದು, ಜಿಲ್ಲಾಡಳಿತ ಸೂಕ್ತ ಭದ್ರತೆ ನೀಡುವಂತೆ ಜಿಲ್ಲೆಯ ವಿವಿಧ ತಾಲೂಕಿನ ರೈತರು ಒತ್ತಾಯಿಸಿದ್ದಾರೆ.
ಗುರುವಾರ ಸಂಜೆ ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಬಾಗಲಕೋಟೆ, ಹುನಗುಂದ ತಾಲೂಕಿನ ವಿವಿಧ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಕೆಲಹೊತ್ತು ಧರಣಿ ನಡೆಸಿದರು.
ನಾವು ಬೆಳೆದ ಕಬ್ಬು ಕಟಾವಿಗೆ ಬಂದಿದ್ದು, ನೀರಿನ ಕೊರತೆ, ಮಳೆ ಅಭಾವದಿಂದ ಬೆಳೆದು ನಿಂತ ಕಬ್ಬು ಒಣಗುವ ಭೀತಿ ಇದೆ. ಹೀಗಾಗಿ ನಾವು ಬೇಗನೆ ಕಬ್ಬು ನುರಿಸುವ ಹಂಗಾಮು ಆರಂಭಿಸಲು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಮನವಿ ಮಾಡಿದ್ದೇವೆ. ಕಬ್ಬು ಕಟಾವು ಮಾಡಿ, ಕಾರ್ಖಾನೆಗಳಿಗೆ ಟ್ರ್ಯಾಕ್ಟರ್, ಚಕ್ಕಡಿ, ಲಾರಿಗಳಲ್ಲಿ ಹೇರಿಕೊಂಡು ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಕೆಲವರು ಕಬ್ಬು ಸಾಗಿಸುವ ವಾಹನಗಳನ್ನು ರಸ್ತೆಯಲ್ಲಿ ತಡೆದು ಸಾಗಾಣಿಕೆದಾರರು, ವಾಹನ ಮತ್ತು ಚಾಲಕರಿಗೆ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ನಾವು ಕಾರ್ಖಾನೆಗೆ ಕಬ್ಬು ತರುವ ವಾಹನಗಳು, ಸಕ್ಕರೆ ಕಾರ್ಖಾನೆ ತಲುಪುವವರೆಗೂ ಸಂಪೂರ್ಣ ರಕ್ಷಣೆ ಕೊಡಬೇಕೆಂದು ಆಗ್ರಹಿಸಿದರು.
ರೈತರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಮಖಂಡಿ ಡಿವೈಎಸ್ಪಿ, ಮುಧೋಳ ಸಿಪಿಐ ಮತ್ತು ಪಿಎಸ್‌ಐ, ಮಹಾಲಿಂಗಪುರ ಪಿಎಸ್‌ಐ, ಲೋಕಾಪುರ ಪಿಎಸ್‌ಐ ಅವರಿಗೆ ಪ್ರತ್ಯೇಕ ಮನವಿ ಕೂಡ ಸಲ್ಲಿಸಿದ್ದಾರೆ. ಮುದಕಪ್ಪ ದೊಡಮನಿ, ಮುತ್ತಪ್ಪ ವಜ್ಜರಮಟ್ಟಿ, ಸಂಜು ಸಿಂಧೆ, ಮಹಾದೇವಪ್ಪ ಉಪ್ಪಾರ, ಗಿರೆಪ್ಪ ತೇಲಿ, ಮಹಾದೇವ ತೇಲಿ, ಶಿವಪ್ಪ ತೇಲಿ, ಶ್ರೀನಿವಾಸ ಪಾಟೀಲ, ದುಂಡಪ್ಪ ಗಣಾಚಾರಿ, ರವೀಂದ್ರ, ಚಿದಾನಂದ ಮಾರಾಪುರ, ಭೀಮಪ್ಪ ಮಾದರ, ಪರಶುರಾಮ ಸವದಿ, ಗುರುನಾಥ ಇತರರು ಇದ್ದರು.