Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರಿಂದ ಪ್ರತಿಭಟನೆ

09:54 AM Oct 16, 2019 | Team Udayavani |

ಧಾರವಾಡ: ಎಲ್‌ಪಿಜಿ ಬಂಕ್‌ ಆರಂಭಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದಿಂದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘವು, 15 ವರ್ಷ ಮೇಲ್ಪಟ್ಟ ಆಟೋರಿಕ್ಷಾಗಳನ್ನು ರದ್ದುಪಡಿಸಿದ್ದಕ್ಕೆ ಬೆಂಗಳೂರು ಮಾದರಿಯಲ್ಲಿ 30 ಸಾವಿರ ರೂ. ಸಹಾಯಧನ ನೀಡಬೇಕು. ಇದರ ಜೊತೆಗೆ ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದೆ.

ನಗರದಲ್ಲಿ ಸುಮಾರು 3500 ಎಲ್‌ಪಿಜಿ ಆಟೋಗಳಿವೆ. ಆದರೆ ಎಲ್‌ಪಿಜಿ ರಿಲ್‌ ಮಾಡಲು ಸರಿಯಾದ ಬಂಕ್‌ ವ್ಯವಸ್ಥೆ ಇಲ್ಲ. ನಗರದಲ್ಲಿ ಒಂದು ಬಂಕ್‌ ಇದ್ದು, ಅದೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಆಟೋ ಚಾಲಕರು ರಾಯಾಪುರಕ್ಕೆ ತೆರಳಿ ಎಲ್‌ಪಿಜಿ ತುಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆಟೋ ಚಾಲಕರು ಎಲ್‌ಪಿಜಿ ತುಂಬಿಸಲು ರಾಯಾಪುರಕ್ಕೆ ತೆರಳುವುದರಿಂದ ಸಾಕಷ್ಟುನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಬೇಕು. ಕೂಡಲೇ ಆಟೋ ಚಾಲಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಅಧ್ಯಕ್ಷ ಜೀವನ ಹುತುರಿ, ವಿ,ಬಿ, ಸಂಜೀವಪ್ಪನವರ, ಲಕ್ಷ್ಮಣ ಜಮನಾಳ, ಸುರೇಶ ರಾಠೊಡ, ಪ್ರಕಾಶ ಮುಳಗುಂದ, ಎಂ.ಎಂ. ಖಾಜಿ, ರಜಾಕ ಹಂಚಿನಮನಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next