ಉಡುಪಿ: ಅಂಗನವಾಡಿ ನೌಕರರಿಗೆ ಕನಿಷ್ಠ ಕೂಲಿ 18,000 ರೂ. ನಿಗದಿಗೊಳಿಸಬೇಕು, ಅಂಗನವಾಡಿ ಮಕ್ಕಳಿಗೆ ಸರಕಾರದಿಂದ ವಿತರಿಸಲಾಗುತ್ತಿದ್ದ ಟೇಕ್ ಹೋಂ ಫುಡ್ ಬದಲಿಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಬೇಕು, 3-6 ವರ್ಷದ ಮಕ್ಕಳಿಗೆ ಬೇಯಿಸಿದ ಪೌಷ್ಟಿಕ ಆಹಾರವನ್ನು ಅಂಚೆ ಮೂಲಕ ತಲುಪಿಸುವ ಯೋಜನೆಯನ್ನು ನಿಲ್ಲಿಸಬೇಕೆಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸುಶೀಲಾ ನಾಡ ಆಗ್ರಹಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಷ್ಟ್ರಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ವತಿಯಿಂದ ಮಣಿಪಾಲ ರಜತಾದ್ರಿಯಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ/ಯುಕೆಜಿ ಅಳವಡಿಸಿದರೆ ಪೂರ್ವ ಶಿಕ್ಷಣ ನೀಡುತ್ತಿರುವ ಅಂಗನವಾಡಿಗಳು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ. ಆದುದರಿಂದ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ/ಯುಕೆಜಿ ಅಳವಡಿಸ ಬಾರದು. ಅನುಕಂಪದ ಆಧಾರ ದಲ್ಲಿರುವ ಅಂಗನವಾಡಿ ಸಹಾಯಕಿ ಕಾರ್ಯ ಕರ್ತೆಯಾಗಿ ಮುಂಭಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಖಾಲಿ
ಯಿರುವ ಸಹಾಯಕಿ/ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಆಗ್ರಹಿಸಿದರು.
ರಾಜ್ಯಮಟ್ಟದ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಜಿಲ್ಲಾ ಮಟ್ಟದ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಲಿಗ್ರಾಮ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವನಿತಾ ಮಾತನಾಡಿ, ನೆರೆ/ಪ್ರವಾಹ ಇತ್ಯಾದಿ ಸಂದರ್ಭ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗುತ್ತದೆ. ಅಂಗನ ವಾಡಿಗಳಿಗೆ ರಜೆ ನೀಡುತ್ತಿಲ್ಲ. ಈ ಬಗ್ಗೆ ಸರಕಾರ ಗಮನಹರಿಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಭಾರತಿ, ಖಜಾಂಚಿ ಬಿ. ಆಶಾಲತಾ ಶೆಟ್ಟಿ, ಬ್ರಹ್ಮಾವರ ತಾ| ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ, ಕಾರ್ಯದರ್ಶಿ ಶೈಲಾ, ಕೋಶಾಧಿಕಾರಿ ಸರೋಜಿನಿ, ಉಡುಪಿ ತಾ| ಸಂಘದ ಕಾರ್ಯದರ್ಶಿ ಅರುಣ, ಕೋಶಾಧಿಕಾರಿ ಸವಿತಾ, ಕುಂದಾಪುರ ತಾ| ಅಧ್ಯಕ್ಷೆ ವನಜಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್. ನರಸಿಂಹ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡ ಕವಿರಾಜ್, ಅಂಗನವಾಡಿ ನೌಕರರು ಉಪಸ್ಥಿತರಿದ್ದರು.