ಬೀದರ: ರೈತರು ಬೆಳೆದ ಉದ್ದು, ಹೆಸರು ಮತ್ತು ಸೋಯಾ ಧಾನ್ಯಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಸರ್ಕಾರವೇ
ನೇರವಾಗಿ ಖರೀದಿಸಬೇಕು ಮತ್ತು ಶೈಕ್ಷಣಿಕ ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಿಗಳನ್ನು ಕೈ ಬಿಟ್ಟು ಖಾಯಂ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಮಾಣಿಕೇಶ ಪಾಟೀಲ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಸುಮಾರು ಐದು ವರ್ಷದ ನಂತರ, ಉದ್ದು, ಹೆಸರು ಮತ್ತು ಸೋಯಾ ಬೆಳೆ ಫಸಲು ಉತ್ತಮವಾಗಿ ಬಂದಿದೆ. ಸಂಸದ ಮತ್ತು ಸಚಿವರು ಬೆಳೆ ಖರೀದಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈವರೆಗೆ ಈಡೇರಿಲ್ಲ. ಮಾರಕಟ್ಟೆಯಲ್ಲಿ ಬೆಲೆ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಧಾನ್ಯಗಳಿ ವೈಜ್ಞಾನಿಕವಾಗಿ ಕನಿಷ್ಠ 5000 ರೂ. ನಿಗದಿ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತ್ತಕೋತ್ತರ ಪದವಿ ವರೆಗೆ ಎಲ್ಲ ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ. ತಾಲೂಕಿಗೆ ಖಾಯಂ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಇಲ್ಲಾ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯ ಹುದ್ದೆಗಳಲ್ಲಿ ಪ್ರಭಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ಜಿಲ್ಲೆಗಳ ಅಧಿಕಾರಿಗಳನ್ನು ನೇಮಕ ಮಾಡಿದಾಗ ಮಾತ್ರ ಜಿಲ್ಲೆ ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯ ಎಂದು ತಿಳಿಸಿದ್ದಾರೆ.
ಪ್ರಮುಖರಾದ ಸುಮಂತ, ರುಬೀನ್ ಮಾಣಿಕ, ಜೆಮ್ಸ್ ಮೈಲೂರ, ಸಂತೋಷ ಮೇತ್ರೆ, ಸೈಯದ್ ಅಲ್ತಾಫ್, ಡೇವಿಡ್
ಮೈಲೂರ್, ಅಮರ ಮೈಲೂರ್, ರಾಜಕುಮಾರ ಪಾಲಿಮಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.