Advertisement

ಬೆಳ್ಮಣ್‌ಗೆ  ಪ್ರಥಮ ದರ್ಜೆ ಕಾಲೇಜು ಬೇಡಿಕೆ

09:05 PM Feb 24, 2022 | Team Udayavani |

ಬೆಳ್ಮಣ್‌:  ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಬೆಳ್ಮಣ್‌ ಭಾಗದಲ್ಲಿ  ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕೆ ಪ್ರಥಮ ದರ್ಜೆ ಕಾಲೇಜಿನ ಅಗತ್ಯ ಇದೆ ಎಂದು ವಿದ್ಯಾರ್ಥಿಗಳ ಹೆತ್ತವರು ಸರಕಾರ, ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ.

Advertisement

ಶಿಕ್ಷಣ ರಂಗದಲ್ಲಿ ಪ್ರಸ್ತುತ ಬಹಳಷ್ಟು ಬದಲಾವಣೆಗಳ ಜತೆ ಅಭಿವೃದ್ಧಿಯೂ ಆಗಿದ್ದು  ಬೆಳ್ಮಣ್‌ ಪರಿಸರದ ಗ್ರಾಮೀಣ ಭಾಗದ ಸುಮಾರು ಏಳು ಪಂಚಾಯತ್‌ಗಳ ವಿದ್ಯಾರ್ಥಿಗಳಿಗೆ ಅನು ಕೂಲವಾಗುವಂತೆ ಈ ಆಗ್ರಹ ವ್ಯಕ್ತವಾಗಿದೆ.

ಬೆಳ್ಮಣ್‌, ಬೋಳ, ಮುಂಡ್ಕೂರು, ಕಾಂತಾವರ, ನಂದಳಿಕೆ, ಕಲ್ಯಾ, ಇನ್ನಾ  ಗ್ರಾ.ಪಂ.  ಸಹಿತ ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಪದವಿ ಪಡೆಯಲು ದೂರದ ಊರುಗಳಿಂದ  ಶಿರ್ವ, ನಿಟ್ಟೆ, ಐಕಳದ ಪ್ರಥಮ ದರ್ಜೆ ಕಾಲೇಜನ್ನು ತಲುಪಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮೀಣ ಪ್ರತಿಭೆಗಳು ಬಸ್‌ ಅಥವಾ  ಇತರ ವಾಹನ ಬಳಸಿ ವಿವಿಧ ಕಾಲೇಜುಗಳಲ್ಲಿ  ಡೊನೇಶನ್‌ ನೀಡಿ ಪದವಿ  ಕಲಿಯುವಂತಾಗಿತ್ತು.  ಈ ಹಿನ್ನೆಲೆಯಲ್ಲಿ  ಗ್ರಾ.ಪಂ.ಗಳಿಗೆ ಕೇಂದ್ರ ಸ್ಥಾನದಲ್ಲಿರುವ ಬೆಳ್ಮಣ್‌ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜೊಂದನ್ನು ಆರಂಭಿಸಿ ಗ್ರಾಮೀಣ ಪ್ರತಿಭೆಗಳಿಗೊಂದು ಶಿಕ್ಷಣದ ದಾರಿ ತೋರಿಸಬೇಕೆಂದು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಮುಂಡ್ಕೂರು, ಬೆಳ್ಮಣ್‌ ಪ.ಪೂ. ಕಾಲೇಜುಗಳಿಂದ 200 ವಿದ್ಯಾರ್ಥಿಗಳಿದ್ದಾರೆ. ಪ್ರತೀ ವರ್ಷ ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜಿನಿಂದ 100 ಹಾಗೂ ಬೆಳ್ಮಣ್‌ ಪ.ಪೂ.  ಕಾಲೇಜಿನಿಂದ 100 ವಿದ್ಯಾರ್ಥಿಗಳು ಹೊರಬರುತ್ತಿದ್ದು ಈ ಸಂಖ್ಯೆ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸಾಕು ಎನ್ನುವ ಲೆಕ್ಕಾಚಾರ ಈ ಭಾಗದ ವಿದ್ಯಾಭಿಮಾನಿಗಳದ್ದು. ಉಳಿದಂತೆ ಕಾಂತಾವರ, ಬೋಳ, ಕಲ್ಯಾ, ಇನ್ನಾ, ನಂದಳಿಕೆ ಭಾಗದಿಂದ ದೂರದೂರಿನ ಕಾಲೇಜಿಗೆ  ಪ್ರಯಾಣ ಬೆಳೆಸುವ ವಿದ್ಯಾರ್ಥಿಗಳು ಬಂದಲ್ಲಿ  300ರ ಗಡಿ ತಲುಪಬಹುದು ಎಂಬ  ಆಶಯ ಈ ಜನರದ್ದು.

ದಾನಿಗಳ ಕೊರತೆ :

Advertisement

ಈಗಾಗಲೇ ಬೆಳ್ಮಣ್‌ನ ಸರಕಾರಿ ಪ.ಪೂ. ಕಾಲೇಜಿಗೆ ಎಸ್‌ಡಿಎಂಸಿಯ ನೆರವು ಬಿಟ್ಟರೆ ದಾನಿಗಳ ನೆರವು ದೊರಕುತ್ತಿಲ್ಲ ಎನ್ನುವುದು ಸಂಸ್ಥೆಯ ವಿದ್ಯಾರ್ಥಿಗಳ ಹೆತ್ತವರ ಅಳಲು. ಹೀಗಿರುವಾಗ ಸರಕಾರ ಆಥವಾ ಇಲಾಖೆಯೇ ಮುಂದೆ ಬಂದು ಇಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಹೊಣೆ ಹೊರಬೇಕಾಗುತ್ತದೆ.

ಪ.ಪೂ. ಕಾಲೇಜಿಗೆ  ಬೆಳ್ಮಣ್‌ ಸೂಕ್ತ ಆಯ್ಕೆ :

ಈಗಾಗಲೇ ಉತ್ತಮ ಫಲಿತಾಂಶದೊಂದಿಗೆ ಜನಪ್ರಿಯತೆಯ ಉತ್ತುಂಗದಲ್ಲಿರುವ ಬೆಳ್ಮಣ್‌ ಸರಕಾರಿ ಪ.ಪೂ. ಕಾಲೇಜಿನಲ್ಲಿ ಕಲಾ, ವಾಣಿಜ್ಯ,  ವಿಜ್ಞಾನಗ ವಿಭಾಗಗಳ  ಕಾಂಬಿನೇಶನ್‌ ಇದೆ. ಇಲ್ಲಿನ ಉಪನ್ಯಾಸಕರ ಶ್ರಮದಿಂದ ಈ ಕಾಲೇಜು ನಿರಂತರವಾಗಿ ಉತ್ತಮ ಫಲಿತಾಂಶ ಬರುತ್ತಿ¤ದೆ. ಇದೇ ಕಾಲೇಜಿನಲ್ಲಿ ಅಗತ್ಯ ಬಿದ್ದರೆ ವಿಜ್ಞಾನ  ಹೊರ‌ತುಪಡಿಸಿ ಕಲೆ,  ವಾಣಿಜ್ಯ ವಿಭಾಗಗಳಲ್ಲಿ ಪದವಿ ತರಗತಿ ಆರಂಭಿಸಬಹುದು ಎಂಬ ಸಲಹೆ  ಕೇಳಿ ಬರುತ್ತಿವೆ. ಆದರೆ ಇಲ್ಲಿ ಈಗಾಗಲೇ ಕಟ್ಟಡ, ಆಟದ ಮೈದಾನ,  ಕುಡಿಯುವ ನೀರು  ಇನ್ನಿತರ  ಮೂಲ ಸೌಲಭ್ಯಗಳ ಕೊರತೆ ಬಾಧಿಸುತ್ತಿದೆ. ಪ.ಪೂ. ಕಾಲೇಜಿನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ. ಇಲ್ಲಿನ ಬೇಡಿಕೆಗಳ ಪಟ್ಟಿಯೇ ಹೀಗಿರುವಾಗ  ಪ್ರಥಮ ದರ್ಜೆ ಕಾಲೇಜಿನ ಬೇಡಿಗೆ ಸ್ಪಂದನೆ ಸಿಕ್ಕೀತೇ  ಎನ್ನುವ ಯಕ್ಷ ಪ್ರಶ್ನೆ ಈ ಭಾಗದ ಶಿಕ್ಷಣ ಚಿಂತಕರದ್ದಾಗಿದೆ.

ಈ ಕುರಿತು ಸಚಿವನಾಗಿ ಇಲಾಖೆಯ ಮೂಲಕ ಮಂಜೂರಾತಿಗೆ ಪ್ರಯತ್ನ  ನಡೆಸುತ್ತೇನೆ.ವಿ. ಸುನಿಲ್‌ ಕುಮಾರ್‌,  ಇಂಧನ  ಸಚಿವರು

ಬೆಳ್ಮಣ್‌ಗೆ ಸ.ಪ್ರ. ದರ್ಜೆ ಕಾಲೇಜು ಅಗತ್ಯವಾಗಿ ಬೇಕು. ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಬಹಳಷ್ಟು ಹಣ ವ್ಯಯಿಸಿ ದೂರದೂರಿಗೆ ಪ್ರಯಾಣಿಸಿ ಪದವಿ ಪಡೆಯಬೇಕಾಗಿದೆ. ಆದ್ದರಿಂದ ಇದು ಆಗತ್ಯ. ರವೀಂದ್ರ ಶೆಟ್ಟಿ, ಶಿಕ್ಷಣ ಪ್ರೇಮಿ ಬೆಳ್ಮಣ್‌

ಬೆಳ್ಮಣ್‌ನಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಿದರೆ ಒಳ್ಳೆಯದು. ಸತೀಶ್‌ ಮಾಡ, ಕಾಲೇಜಿನ ಅಭಿವೃದ್ಧಿಯ ಚಿಂತಕ

ಈ ಬಗ್ಗೆ ಕಾರ್ಕಳ ಶಾಸಕರ ಮೂಲಕ ಪ್ರಯತ್ನಿಸಲಾಗುತ್ತಿದೆ. ಶಾಸಕರು ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಗತ್ಯವಾಗಿ ಬೇಕು. ರೇಷ್ಮಾ  ಉದಯ ಶೆಟ್ಟಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ

 

ಶರತ್‌ ಶೆಟ್ಟಿ  ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next