Advertisement

ವಿಟ್ಲದಲ್ಲಿ ಅಗ್ನಿಶಾಮಕದಳ ಘಟಕ ಸ್ಥಾಪನೆಗೆ ಸರ್ವತ್ರ ಆಗ್ರಹ

01:19 AM Apr 03, 2021 | Team Udayavani |

ವಿಟ್ಲ: ಕಳೆದ ಎರಡು ವರ್ಷಗಳಿಂದ ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ಬೆಂಕಿ ಅವಘಡಗಳು ಹೆಚ್ಚಾ ಗುತ್ತಿರುವುದರಿಂದ ವಿಟ್ಲದಲ್ಲಿ ಅಗ್ನಿಶಾಮಕದಳ ಘಟಕ ಸ್ಥಾಪಿಸಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ. 2020-21ನೇ ಸಾಲಿನಲ್ಲಿ ಅತೀ ಹೆಚ್ಚು ಬೆಂಕಿ ಆಕಸ್ಮಿಕ ಸಂಭವಿ ಸಿದ್ದು ಅಪಾರ ಸೊತ್ತು ಗಳು ನಾಶ ವಾಗಿವೆ. ಆದುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಆವಶ್ಯಕತೆ ಯನ್ನು ಪೂರೈಸಬೇಕೆಂದು ಬೇಡಿಕೆ ಮಂಡಿಸಿದ್ದಾರೆ.

Advertisement

ಪುತ್ತೂರು, ಬಂಟ್ವಾಳದಿಂದ ಬರಬೇಕು
ಪ್ರಸ್ತುತ ವಿಟ್ಲ ಹೋಬಳಿಯ ವ್ಯಾಪ್ತಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ, ಮಾಹಿತಿ ಸಿಕ್ಕಿದ ತತ್‌ಕ್ಷಣ ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿರುವ ಅಗ್ನಿ ಶಾಮಕದಳ ಘಟಕದ ಸಿಬಂದಿ ಆಗಮಿಸಬೇಕು. ಬಂಟ್ವಾಳದಿಂದ ವಿಟ್ಲ ಪೇಟೆಗೆ 17 ಕಿ.ಮೀ. ದೂರ ಮತ್ತು ಪುತ್ತೂರಿನಿಂದ ವಿಟ್ಲಕ್ಕೆ 14 ಕಿ.ಮೀ. ದೂರವಿದೆ. ಮಾಹಿತಿ ಸಿಕ್ಕಿದ ಬಳಿಕ ಅವರು ವಿಟ್ಲ ಪೇಟೆಗೆ ತಲುಪಲು ಕನಿಷ್ಠ 20ರಿಂದ 25 ನಿಮಿಷಗಳು ಬೇಕಾಗುತ್ತದೆ. ಈ ಅವಧಿಯಲ್ಲಿ ಪೇಟೆಯಲ್ಲೇ ಅವಘಡಗಳು ಸಂಭವಿಸಿದರೂ ಅಗ್ನಿ ಶಾಮಕ ದಳದವರು ತಲುಪುವ ವೇಳೆ ಸಾಕಷ್ಟು ಅನಾಹುತಗಳು ನಡೆದು ಹೋಗಿರುತ್ತದೆ. ಮಾಣಿಲ, ಪೆರು ವಾಯಿ, ಕನ್ಯಾನ, ಕರೋಪಾಡಿ, ಪುಣಚ, ಕೇಪು, ಅಳಿಕೆ, ವಿಟ್ಲಮುಟ್ನೂರು, ವಿಟ್ಲಪಟ್ನೂರು, ಕೊಳ್ನಾಡು ಗ್ರಾಮಗಳಿಗೆ ತಲುಪುವಾಗ ಏನೂ ಉಳಿದಿರುವುದಿಲ್ಲ. ಸ್ಥಳೀಯರು ಬೆಂಕಿಯನ್ನು ನಂದಿಸಿದ ಬಳಿಕ ಅಗ್ನಿಶಾಮಕದಳದವರು ತಲುಪುವುದು ಮಾಮೂಲಿ. ಕೆಲವೊಮ್ಮೆ ಬೆಂಕಿ ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ.

6-8 ತಿಂಗಳಲ್ಲಿ ನಡೆದ ಅಗ್ನಿ ಅವಘಡಗಳು
6-8 ತಿಂಗಳಲ್ಲಿ ವಿಟ್ಲ ಪರಿಸರದಲ್ಲಿ ನಡೆದ ಅಗ್ನಿ ಅವಘಡಗಳು ಅನೇಕ. ವಿಟ್ಲ ಜಂಕ್ಷನ್‌ನಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಪೊಲೀಸರ ಗಮನಕ್ಕೆ ಬಂದು, ಸ್ಥಳೀಯರಿಗೆ ಮಾಹಿತಿ ನೀಡಿದ್ದರಿಂದ ಅವರೆಲ್ಲರ ಸಹಕಾರದಲ್ಲಿ ಬೆಂಕಿ ನಂದಿಸಲ್ಪಟ್ಟಿತ್ತು. ವಿಟ್ಲ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಅಂಗಡಿ ಸಂಪೂರ್ಣ ಭಸ್ಮಗೊಂಡಿತ್ತು. ಕೆಲವೇ ದಿನಗಳ ಹಿಂದೆ ಚಂದಳಿಕೆಯಲ್ಲಿ ಗ್ಯಾರೇಜ್‌ ಭಸ್ಮವಾಗಿ 50 ಲಕ್ಷ ರೂ. ನಷ್ಟ ಸಂಭವಿಸಿತು. ಕುಕ್ಕಿಲದಲ್ಲಿ ಕೃಷಿಕರ ಭೂಮಿಯಲ್ಲಿ ಬೆಂಕಿ ಹಬ್ಬಿ ಸುಮಾರು 15 ಎಕರೆ ಭೂಮಿಯಲ್ಲಿ ರಬ್ಬರ್‌ ಇತ್ಯಾದಿ ಕೃಷಿ ನಾಶವಾಯಿತು. ಕೋಡಪದವು, ಕರೋಪಾಡಿ, ವಿಟ್ಲದ ಪಳಿಕೆ, ಮಾಣಿಲ ಮತ್ತು ಪೆರುವಾಯಿ ಗ್ರಾಮಗಳಲ್ಲಿರುವ ಗುಡ್ಡ, ಕಳೆಂಜಿಮಲೆ ರಕ್ಷಿತಾರಣ್ಯ ಇತ್ಯಾದಿ ಕಡೆಗಳಲ್ಲಿ ಬಿಸಿಲ ಬೇಗೆಗೆ ಬೆಂಕಿಯ ಕೆನ್ನಾಲಗೆ ಹಬ್ಬಿ ಭಾರೀ ನಷ್ಟ ಸಂಭವಿಸಿವೆ. ಇದನ್ನೆಲ್ಲ ಮನಗಂಡು ವಿಟ್ಲದಲ್ಲೇ ಅಗ್ನಿಶಾಮಕದಳದ ಘಟಕವನ್ನು ಆರಂಭಿಸಬೇಕೆಂದು ನಾಗರಿಕರು ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದು ಪ್ರಯೋಜನವಾಗಲಿಲ್ಲ. ಇತ್ತೀಚೆಗೆ ವಿಟ್ಲ ಪೇಟೆಯಲ್ಲೇ ನಡೆದ ಕೆಲವು ಅಂಗಡಿಗಳು ಅಗ್ನಿಗಾಹುತಿಯಾದ ಬಳಿಕ ಈ ಬೇಡಿಕೆ ಹೆಚ್ಚಾಗಿದೆ.

ಗಮನಕ್ಕೆ ತರಲಾಗುವುದು
ವಿಟ್ಲದಲ್ಲಿ ಅಗ್ನಿಶಾಮಕದಳ ಘಟಕ ಸ್ಥಾಪಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಅನುದಾನ, ಜಾಗ ಇತ್ಯಾದಿ ವಿಚಾರದಲ್ಲಿ ಆಡಳಿತ ವ್ಯವಸ್ಥೆಯ ಗಮನಕ್ಕೆ ತರಲಾಗುತ್ತದೆ.
-ಮಾಲಿನಿ, ಮುಖ್ಯಾಧಿಕಾರಿ, ವಿಟ್ಲ ಪಟ್ಟಣ ಪಂಚಾಯತ್

Advertisement

Udayavani is now on Telegram. Click here to join our channel and stay updated with the latest news.

Next