Advertisement

ಅನುಭವಿ ಶಿಕ್ಷಕರ ನೇಮಕಕ್ಕೆ ಆಗ್ರಹ

05:08 PM Jun 16, 2018 | Team Udayavani |

ಶಹಾಪುರ: ಅರ್ಹತೆ ಇಲ್ಲದವರನ್ನು ಶಿಕ್ಷಕರ ಹುದ್ದೆಗೆ ನೇಮಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಹಾಳು
ಮಾಡುವಂತ ಪರಿಸ್ಥಿತಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆದಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅನುಭವಿ ಅರ್ಹತೆ ಹೊಂದಿದ ಶಿಕ್ಷಕರನ್ನು ನೇಮಿಸಿಕೊಳ್ಳಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿ ಬಿಇಒ ಅವರಿಗೆ ಮನವಿ ಸಲ್ಲಿಸಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಮಲ್ಲಣ್ಣ ಪರಿವಾಣ, ಇಲ್ಲಿನ ವಿವಿಧ  ಖಾಸಗಿ  ಶಿಕ್ಷಣ ಸಂಸ್ಥೆಗಳಲ್ಲಿ ಅನರ್ಹತೆ ಹೊಂದಿದ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುವಂತ ಕೆಲಸ
ನಡೆದಿದೆ. ಅರ್ಹತೆ ಇಲ್ಲದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಹೀಗಾಗಿ ಸಾಕಷ್ಟು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಕುರಿತು ಮೇಲಧಿಕಾರಿಗಳು ಪರಿಶೀಲನೆ ನಡೆಸಬೇಕು. ದೂರು ಬಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುವ ಮೂಲಕ ಅರ್ಹತೆ ಹೊಂದಿದವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳುವಂತೆ ಸೂಚಿಸಬೇಕು. ಅಲ್ಲದೆ ಗುಣಮಟ್ಟದ ಶಿಕ್ಷಣ ಸೌಲಭ್ಯ ಕಲ್ಪಿಸಲು ಸೂಚಿಸಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಕೊರತೆ ಒಂದೆಡೆಯಾದರೆ, ಖಾಸಗಿ ಶಾಲೆಗಳಲ್ಲಿ ಅನುಭವಿ ಶಿಕ್ಷಕರ
ಕೊರತೆಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಕಳಪೆ ಮಟ್ಟದ ಫಲಿತಾಂಶ ಬರುವಂತಾಗಿದೆ. ಇದು ಇಡೀ ಜಿಲ್ಲೆಗೆ ನಾಚಿಕೆ ತರುವಂಥ ಸಂಗತಿ. ಕಾರಣ ಶಿಕ್ಷಣಾಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ಶಾಲೆಗಳತ್ತ ಗಮನ ಹರಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಆಗಾಗ ಕಾರ್ಯಗಾರ ನಡೆಸುವ ಮೂಲಕ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಭೀಮನಗೌಡ ಹುಲ್ಕಲ್‌, ಮಲ್ಲಪ್ಪ ತಡಿಬಿಡಿ, ಹಣಮಂತ್ರಾಯ ಗೌಡ, ಮಲ್ಲಪ್ಪ, ದೇವೀಂದ್ರಪ್ಪ ಮಡ್ನಾಳ, ಭೀಮಣ್ಣ, ಮಲ್ಲಪ್ಪ ಸಲಾದಪುರ, ಭೀಮಾಶಂಕರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next