ಕೋಲಾರ: ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಪೇಸ್-2 ರಲ್ಲಿ ಸುಮಾರು 511 ಎಕರೆ ಭೂ ಸ್ವಾಧೀನ ಪಡಿಸಿಕೊಂಡಿದ್ದು, ಇದರ ಹಿನ್ನೆಲೆ ವೇಮಗಲ್ ಪ್ರವಾಸಿ ಮಂದಿರದಲ್ಲಿ ಭೂ ಸ್ವಾದೀನಕ್ಕೊಳಪಡುವ ರೈತರ ಸಭೆ ಹಮ್ಮಿಕೊಳ್ಳಲಾಗಿತ್ತು.
ಕೆಲಸ ನೀಡಿ: ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ವೇಮಗಲ್ ಭಾಗದ ಪೇಸ್-1 ರಲ್ಲಿ ಶುರುವಾಗಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕೆಲಸ ನೀಡುತ್ತಿಲ್ಲವೆಂದು ಸಾಕಷ್ಟು ದೂರುಗಳು ಬಂದಿವೆ. ಸ್ಥಳೀಯರಿಂದ ಕಂಪನಿಗಳಿಗೆ ಏನು ಸಮಸ್ಯೆ ಆಗುತ್ತದೆ ಹೇಳಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಸ್ಥಳೀಯ ರೈತರು ಕೈಗಾರಿಕೆ ಗಳು ಸ್ಥಾಪನೆ ಮಾಡಲು ಭೂಮಿ ನೀಡಿದ್ದೇ ತಪ್ಪಾಯಿತಾ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಕುರುಗಲ್, ಮಲಿಯಪ್ಪನಹಳ್ಳಿ ಮತ್ತು ಹಾಜೇìನಹಳ್ಳಿ ಭಾಗದಲ್ಲಿ ಪೇಸ್ -2 ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಆದರೆ ಅಲ್ಲಿನ ರೈತರು ಆಯಾ ಹೊತ್ತಿಗೆ ಬೆಳೆಗಳನ್ನು ಬೆಳೆದುಕೊಂಡು ಜೀವನ ಮಾಡು ತ್ತಿರುತ್ತಾರೆ. ಈಗಲಾದರೂ ಎಚ್ಚೆತ್ತುಕೊಂಡು ಜಮೀನು ನೀಡಿದ ಸ್ಥಳೀಯರಿಗೆ ಕೆಲಸ ನೀಡಿ ಎಂದರು.
ನರಸಾಪುರ ಭಾಗದ ಮಿಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 1.25 ಕೋಟಿ ರೂ. ನೀಡಿದ್ದು, ಇಲ್ಲಿಯೂ ಕೂಡ 1.25 ಕೋಟಿ ರೂ. ನೀಡಬೇಕೆಂದು ರೈತರ ಪರವಾಗಿ ಧ್ವನಿಎತ್ತಿ ಒತ್ತಾಯಿಸಿದರು.
ಸಿಎಸ್‌ಆರ್ ನಿಧಿ ಬಳಕೆಯಾಗಲಿ: ಭೂಮಿ ಕಳೆದುಕೊಂಡವರಿಗೆ ಮೊದಲಿನಿಂದಲೇ ಕೆಲಸ ನೀಡಬೇಕು. ಸ್ಥಳೀಯರಿಗೆ ಖಾಯಂ ಕೆಲಸ ನೀಡಬೇಕು. ಸ್ಥಳೀಯ ಕಂಪನಿಗಳಲ್ಲಿ ಸಿ.ಎಸ್.ಆರ್ ನಿಧಿಯನ್ನು ಸ್ಥಳೀಯ ಭಾಗದಲ್ಲಿ ಬಳಸಬೇಕು. ಇದನ್ನ ಬೇರೆಡೆ ಬಳಸಿದರೆ ಸ್ಥಳೀಯ ಭಾಗದಲ್ಲಿ ಬೆಳವಣಿಗೆ ಆಗುವುದಿಲ್ಲ. ಭೂ ಸ್ವಾಧೀನ ಮುನ್ನವೇ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಹೊಂದಿಕೊಂಡಿರುವ ಜಾಗಗಳನ್ನು ಸ್ವಾಧೀನದಿಂದ ಕೈಬಿಡಬೇಕು. ದೇವಾಲಯ ಮತ್ತು ಸ್ಮಶಾನ ಜಾಗಗಳನ್ನು ಬಿಡ ಬೇಕು, ರಸ್ತೆಗೆ ಹೊಂದಿಕೊಂಡಿರುವ ಮನೆಗಳ ಜಾಗವನ್ನು ಮೊದಲಿನ ಹಂತದಲ್ಲಿಯೇ ಬಿಡ ಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕೆಐಎಡಿಬಿ ವಿಶೇಷ ಭೂ ಸ್ವಾದೀನ ಅಧಿಕಾರಿ-1 ವೆಂಕಟೇಶ್. ಇಂಜಿನಿಯರ್ ಕೃಷ್ಣಮೂರ್ತಿ, ಸ್ಥಳೀಯ ರೈತರು, ಮುಖಂಡರು ಭಾಗವಹಿಸಿದ್ದರು.