Advertisement

ಪಂಚಾಯತ್‌ರಾಜ್‌ ವಿಭಾಗಕ್ಕೂ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳ ಬೇಡಿಕೆ

09:40 PM Sep 10, 2020 | mahesh |

ಬಂಟ್ವಾಳ: ಗ್ರಾಮೀಣ ಭಾಗಗಳಲ್ಲಿ ಸರಕಾರಿ ಅನುದಾನದ ಕಾಮಗಾರಿಗಳು ಜಿ.ಪಂ. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮೂಲಕ ಅನುಷ್ಠಾನಗೊಳ್ಳುತ್ತಿದ್ದು, ಆದರೆ ಈ ವಿಭಾಗದಲ್ಲಿ ಸಿವಿಲ್‌ ಎಂಜಿನಿಯರ್‌ಗಳು ಮಾತ್ರ ಇರುವುದರಿಂದ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಮೆಸ್ಕಾಂ ಎಂಜಿನಿಯರ್‌ಗಳನ್ನೇ ಆಶ್ರಯಿಸಬೇಕಾದ ಸ್ಥಿತಿ ಇದೆ. ಹೀಗಾಗಿ ಜಿ.ಪಂ. ಎಂಜಿನಿಯರಿಂಗ್‌ ವಿಭಾಗದಲ್ಲೂ ಎಲೆಕ್ಟ್ರಿಕಲ್‌ ಎಂಜಿ ನಿಯರ್‌ಗಳು ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ.

Advertisement

ಇದು ಮೆಸ್ಕಾಂ ಎಂಜಿನಿಯರ್‌ಗಳು ಮಾಡ ಬೇಕಾದ ಕಾರ್ಯಗಳಲ್ಲ. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮೂಲಕವೇ ನಡೆಯಬೇಕಿದ್ದರೂ ಸಿವಿಲ್‌ ಎಂಜಿನಿಯರ್‌ಗಳು ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಪರಿಣಿತರು ಅಲ್ಲದೇ ಇರು ವುದರಿಂದ ಅವರು ಮೆಸ್ಕಾಂ ಎಂಜಿನಿಯರ್‌ಗಳನ್ನು ಕಾಯುತ್ತಾರೆ. ಹೀಗಾಗಿ ಬಹುತೇಕ ಕಾಮಗಾರಿ ವಿಳಂಬವಾಗುತ್ತಿವೆ ಎಂಬ ಆರೋಪ ಇದೆ.

ಪ್ರಸ್ತುತ ಹೇಗೆ ನಡೆಯುತ್ತಿದೆ ಕಾರ್ಯ?
ಗ್ರಾಮೀಣ ಭಾಗಗಳಲ್ಲಿ ಗ್ರಾ.ಪಂ.ಗಳು ಹೊಸ ವಿದ್ಯುತ್‌ ಲೈನ್‌ ಅಥವಾ ಇನ್ಯಾವುದೇ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಅನುದಾನ ಮೀಸಲಿಡುತ್ತವೆ. ಅದರ ಕ್ರೀಯಾಯೋಜನೆಯನ್ನು ಮೆಸ್ಕಾಂ ಎಂಜಿನಿಯರ್‌ಗಳು ಸಿದ್ಧಪಡಿಸುತ್ತಾರೆ. ಬಳಿಕ ಗುತ್ತಿಗೆದಾರರ ಮೂಲಕ ಕಾಮಗಾರಿಗಳು ನಡೆದು, ಅದರ ಪರಿಪೂರ್ಣತೆಯನ್ನೂ ಮೆಸ್ಕಾಂ ಎಂಜಿನಿಯರ್‌ಗಳೇ ಹೇಳಬೇಕಾಗುತ್ತದೆ. ಇಷ್ಟೆಲ್ಲ ಕೆಲಸಗಳು ನಡೆದ ಬಳಿಕ ಅದರ ಬಿಲ್‌ ಪಾವತಿಯ ಕಾರ್ಯವನ್ನು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮೂಲಕವೇ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ಕಾರ್ಯಗಳಿಗೆ ಮೆಸ್ಕಾಂ ಎಂಜಿನಿಯರ್‌ಗಳನ್ನೇ ಕಾಯಬೇಕಿದ್ದು, ಕಾಮಗಾರಿ ವಿಳಂಬಕ್ಕೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಅಂದರೆ ಮೆಸ್ಕಾಂನವರು ತಮ್ಮ ಕೆಲಸದ ಜತೆಗೆ ಇದನ್ನು ಹೆಚ್ಚುವರಿಯಾಗಿ ನಿರ್ವಹಿಸಬೇಕಾಗುತ್ತದೆ.

ಅಧಿಕಾರಿಗಳ ಸಭೆಯಲ್ಲೂ ಚರ್ಚೆ
ಕೆಲವು ದಿನಗಳ ಹಿಂದೆ ಬಂಟ್ವಾಳ ತಾ.ಪಂ.ನಲ್ಲಿ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಗುತ್ತು ನೇತೃ ತ್ವದಲ್ಲಿ ನಡೆದ ಗ್ರಾ.ಪಂ. ಪಿಡಿಒ ಹಾಗೂ ಆಡಳಿತಾಧಿ ಕಾರಿಗಳ ಸಭೆಯಲ್ಲಿ 14ನೇ ಹಣಕಾಸು ಯೋಜನೆಯ ಬಹುತೇಕ ಕಾಮಗಾರಿಗಳ ವಿಳಂಬಕ್ಕೆ ಇದೇ ಸಮಸ್ಯೆ ಎದುರಾಗಿದ್ದು, ಒಂದು ವೇಳೆ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳು ಇರುತ್ತಿದ್ದರೆ ಈ ತೊಂದರೆ ಇರುತ್ತಿರಲಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು.

ಹಿಂದೆ ಜಿಲ್ಲೆಗೊಬ್ಬರು ಇದ್ದರು
ಕೆಲವು ವರ್ಷಗಳ ಹಿಂದೆ ಜಿ.ಪಂ. ಎಂಜಿನಿಯರಿಂಗ್‌ ವಿಭಾಗದಲ್ಲಿ ಜಿಲ್ಲೆಗೆ ಒಬ್ಬರು ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳು ಇರುತ್ತಿದ್ದರು. ಆದರೆ ಹಿಂದೆ ಇದ್ದ ಎಂಜಿನಿಯರ್‌ಗಳು ನಿವೃತ್ತಿ ಹೊಂದಿದ ಬಳಿಕ ಹೊಸ ಹುದ್ದೆಗಳನ್ನು ನೇಮಕ ಮಾಡದೆ, ಎಲೆಕ್ಟ್ರಿಕಲ್‌ ಹುದ್ದೆಯನ್ನೇ ತೆಗೆದು ಹಾಕಲಾಗಿತ್ತು ಎಂದು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಒಬ್ಬರಾದರೂ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳು ಬೇಕು ಎಂಬ ಬೇಡಿಕೆ ಇದೆ.

Advertisement

ವಿ. ಸಭೆಯಲ್ಲೂ ಚರ್ಚೆ
ಗ್ರಾಮೀಣ ಭಾಗಗಳಲ್ಲಿ ಕಟ್ಟಡದ ವಿದ್ಯುತ್‌ ಸಂಪರ್ಕ ವ್ಯವಸ್ಥೆ, ವಿದ್ಯುತ್‌ ಲೈನ್‌ ವರ್ಕ್‌ ಹೀಗೆ ಹಲವು ಕಾಮಗಾರಿಗಳು ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳಿಲ್ಲದೆ ಬಾಕಿಯಾಗಿದ್ದು, ಹೀಗಾಗಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳ ಹುದ್ದೆಯನ್ನು ಸೃಷ್ಟಿಸು ವಂತೆ ಬಂಟ್ವಾಳ ಶಾಸಕರು ಒಂದೂವರೆ ವರ್ಷಗಳ ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾವಿಸಿದ್ದರು.

ಮೆಸ್ಕಾಂ ಎಂಜಿನಿಯರ್‌ಗಳು ನಿರ್ವಹಣೆ
ಪ್ರಸ್ತುತ ಎಲೆಕ್ಟ್ರಿಕಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಮೊದಲಾದ ಕೆಲಸಗಳನ್ನು ಮೆಸ್ಕಾಂ ಎಂಜಿನಿಯರ್‌ಗಳ ಮೂಲಕವೇ ಮಾಡಲಾಗುತ್ತದೆ. ಅಂದರೆ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಸಿವಿಲ್‌ ಎಂಜಿನಿಯರ್‌ಗಳು ಮಾತ್ರ ಇರುತ್ತಾರೆ. ಹೀಗಾಗಿ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಎಲೆಕ್ಟ್ರಿಕಲ್‌
ಎಂಜಿನಿಯರ್‌ಗಳ ವಿಚಾರವನ್ನು ಪ್ರಸ್ತಾವಿಸಿದ್ದರು.
-ತಾರಾನಾಥ್‌ ಸಾಲ್ಯಾನ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ಬಂಟ್ವಾಳ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next