ನಾಲತವಾಡ: ಗಣೇಶನ ಚತಿರ್ಥಿ ಹತ್ತಿರವಾಗುತ್ತಿದ್ದಂತೆ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದ್ದು ಅದರಲ್ಲೂ ಪರಿಸರ ಸ್ನೇಹಿ ಮೂರ್ತಿಗಳಿಗೆ ಬೇಡಿಕೆ ಅತಿಯಾಗಿದೆ. ಆಷಾಢ ಮುಗಿದು ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬಗಳ ಸುಗ್ಗಿ ಜೋರಾಗಿಯೇ ಇರುತ್ತದೆ. ಪರಿಣಾಮ ಪಟ್ಟಣದ ಗಣೇಶ ಮೂರ್ತಿಗಳ ಪ್ರಸಿದ್ಧ ವ್ಯಾಪಾರಿಗಳಾದ ರಾಘವೇಂದ್ರ ಚಿತ್ರಗಾರ್ (ಪೇಟಕರ್) ಈ ಬಾರಿ ಬಗೆ ಬಗೆಯ ಗಣೇಶನ ವಿಗ್ರಹಗಳನ್ನು ತಂದಿದ್ದು ಗಮನ ಸೆಳೆಯುತ್ತಿವೆ. ಕಳೆದ ಒಂದು ವಾರದಿಂದಷ್ಟೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಸುಮಾರು 20ಕ್ಕೂ ಹೆಚ್ಚು ಬಗೆಯ ಸಂಪೂರ್ಣ ಮಣ್ಣಿನ ಗಣೇಶನ ವಿಗ್ರಹಗಳು ಬಂದಿದ್ದು ಪರಿಸರಕ್ಕೆ ಧಕ್ಕೆಯಾಗದಂತಹ ಬಗೆಯ ಸುಣ್ಣ ಬಣ್ಣ ನೀಡುವ ಕಾರ್ಯ ನಡೆದಿದ್ದರೆ ಇನ್ನೊಂದೆಡೆ ತಮಗೀಷ್ಟವಾದ ಗಣಪನ ಖರೀದಿಗೆ ಬುಕಿಂಗ್ ಜೋರಾಗಿ ನಡೆದಿದೆ. ಪರಿಸರದ ಮೇಲೆ ಪರಿಣಾಮ ಬೀರಬಹುದಾದ ಪಿಒಪಿ ಗಣಪತಿ ಮೂರ್ತಿಗಳಿಗೆ ಕಡಿವಾಣ ಹಾಕಿದ ಜಿಲ್ಲಾಡಳಿತ ಆದೇಶದ ಹಿನ್ನೆಲೆ ರಾಘವೇಂದ್ರ ಪೇಟಕರ್ ಎಂಬುವರು ಸುಮಾರು 30ಕ್ಕೂ ನಾನಾ ರೂಪಕ ಮಣ್ಣಿನ ಮೂರ್ತಿಗಳನ್ನೇ ಮಾರಾಟಕ್ಕೆ ತಂದಿದ್ದು ವಿಶೇಷವಾಗಿದೆ. ವಿಭಿನ್ನ ಶೈಲಿಯ ಗಣಪತಿಗಳು: ಈ ಬಾರಿ ಖರೀದಿದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಕಲಾಕಾರರು ಸಿದ್ಧ ಪಡಿಸಿದ ಮೂರ್ತಿಗಳ ಆಗಮನವಾಗಿದ್ದು ಕಿನ್ನಾಳದಲ್ಲಿ ಸುಮಾರು 100 ಕಲಾಕಾರರಿಗೆ ಗಣೇಶ ಮೂರ್ತಿಯನ್ನೇ ಸಿದ್ದಪಡಿಸಲು ಸರಕಾರವೇ ನೀಡಿದ 5 ಎಕರೆ ಜಮೀನಿನ ಉತ್ತಮ ಜೇಡಿ ಮಣ್ಣಿನ ಮೂರ್ತಿಗಳನ್ನು ಮಾರಾಟಕ್ಕೆ ತರಲಾಗಿದೆ. 400 ರೂ.ದಿಂದ 20 ಸಾವಿರ ರೂ. ಬೆಲೆ ಬಾಳುವ 1 ಅಡಿಯಿಂದ 7 ಅಡಿ ಎತ್ತರದ ಗಣಪತಿಗಳನ್ನು ತರಲಾಗಿದೆ. ವಿವಿಧ ಬಗೆಯ ಪರಮೇಶ್ವರ, ಶಂಕು, ಅಂಶ, ಭೂಮಿ, ಭೂಮಂಡಲ, ಕೃಷ್ಣ, ಆನೆ, ನವಿಲು, ಬಾಹುಬಲಿ, ಮಹಾರಾಜ. ನಂದಿ ಪರಮೇಶ್ವರ, ಬಾತುಕೋಳಿ ಇನ್ನೂ ಹಲವು ದೇವ ದೇವತೆಯರು ಹೊತ್ತ ಮೂರ್ತಿಗಳನ್ನು ಮಾರಾಟಕ್ಕೆ ಬಂದಿದ್ದು ಗಮನ ಸೆಳೆಯುತ್ತಿವೆ.
ಲಕ್ಷ್ಮೀ ಬಿರಾದಾರ